ಕೇಂದ್ರದ ರೈಲ್ವೆಖಾತೆ ಸಚಿವೆ ಮಮತಾ ಬ್ಯಾನರ್ಜಿ ಪ್ರಯಾಣಿಕ ದರಗಳಲ್ಲಿ ಹೆಚ್ಚಳ ಮಾಡದೇ, ಸರಕು ಸಾಗಾಣೆ ದರಗಳಲ್ಲಿ ಅಲ್ಪ ಹೆಚ್ಚಳ ಮಾಡಿ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಕೇಂದ್ರ ರೈಲ್ವೆ ಅಡಳಿತ ಮಂಡಳಿ ಪ್ರಯಾಣಿಕ ದರ ಏರಿಕೆಯ ಪರವಾಗಿದ್ದರೂ ಸಚಿವೆ ಬ್ಯಾನರ್ಜಿ ದರ ಏರಿಕೆಗೆ ಸಂಪೂರ್ಣ ವಿರುದ್ಧವಾಗಿರುವುದರಿಂದ, ಪ್ರಸಕ್ತ ಬಜೆಟ್‌ನಲ್ಲಿ ಪ್ರಯಾಣಿಕ ದರಗಳಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ರೈಲ್ವೆ ಬಜೆಟ್ ಫೆಬ್ರವರಿ 24 ರಂದು ಮಂಡನೆಯಾಗಲಿದ್ದು,ಜಾಗತಿತ ಆರ್ಥಿಕ ಕುಸಿತದಿಂದ ಆರ್ಥಿಕ ಕುಸಿತ ಕಂಡಿರುವ ಕೈಗಾರಿಕೋದ್ಯಕ್ಕೆ ಅಲ್ಪ ತೊಂದರೆಯಾಗುವ ಸಾಧ್ಯತೆಗಳಿವೆ. ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಸಿಮೆಂಟ್ ಸರಕು ಸಾಗಾಣೆ ದರಗಳಲ್ಲಿ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.
ಆದರೆ ಕೆಲ ಮೂಲಗಳ ಪ್ರಕಾರ,ಸಚಿವೆ ಮಮತಾ ಬ್ಯಾನರ್ಜಿ,ಅಗತ್ಯ ದಿನಸಿ ಅಹಾರ ವಸ್ತುಗಳ ಸರಕು ಸಾಗಾಣೆ ದರಗಳಲ್ಲಿ ಇಳಿಕೆ ಮಾಡುವುದಾಗಿ ಸೂಚನೆಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.