ಯುಪಿಎ ಮಿತ್ರಪಕ್ಷಗಳ ವಿರೋಧದಿಂದಾಗಿ ಶೀಘ್ರದಲ್ಲಿ ತೈಲ ದರ ಏರಿಕೆಯಾಗುವ ಸಾಧ್ಯತೆಗಳಿಲ್ಲ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ.
ಮಾರುಕಟ್ಟೆಯ ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ತೈಲ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ, ಒಂದು ವೇಳೆ ದರವನ್ನು ಹೆಚ್ಚಿಸದಿದ್ದಲ್ಲಿ ತೈಲ ಕಂಪೆನಿಗಳು ದಿವಾಳಿ ಘೋಷಿಸುವ ಸಾಧ್ಯತೆಗಳಿವೆ.ವಿತ್ತ ಸಚಿವರೊಂದಿಗೆ ನಡೆಸಿದ ಭೇಟಿಯಲ್ಲಿ ಕೂಡಾ ಸೂಕ್ತ ದಾರಿಯನ್ನು ಕಂಡುಕೊಳ್ಳಲಾಗಲಿಲ್ಲ ಎಂದು ದೇವ್ರಾ ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ ಕುರಿತಂತೆ, ಇಲ್ಲಿಯವರೆಗೆ ನಿರ್ಧಾರ ತೆಗೆದುಕೊಳ್ಳಲಾಗಿಲ್ಲವೆಂದು ದೇವ್ರಾ ಮುಖರ್ಜಿಯವರ ಭೇಟಿಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತೈಲ ಕಂಪೆನಿಗಳು ಅನುಭವಿಸುತ್ತಿರುವ ನಷ್ಟ ಹಾಗೂ ಕಿರಿಟ್ ಪಾರೀಖ್ ಸಮಿತಿಯ ವರದಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಎಸ್.ಸುಂದರೇಶನ್ ವಿವರಣೆ ನೀಡಿದ್ದಾರೆ.
ಯುಪಿಎ ಮೈತ್ರಿಕೂಟದ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಪಕ್ಷಗಳು ತೈಲ ದರ ಏರಿಕೆಯನ್ನು ವಿರೋಧಿಸುತ್ತಿವೆ.ಆದರೆ ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ಮಾರಾಟದಿಂದ ಎದುರಾದ ನಷ್ಟವನ್ನು ಭರಿಸಲು ಸರಕಾರ ಪರಿಹಾರ ನೀಡುವಂತೆ ದೇವ್ರಾ ಮನವಿ ಮಾಡಿದ್ದಾರೆ.