ನ್ಯೂಯಾರ್ಕ್ , ಮಂಗಳವಾರ, 16 ಫೆಬ್ರವರಿ 2010( 12:10 IST )
PTI
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ಮೊಬೈಲ್ ಫೋನ್‌ಗಳ ಬೇಡಿಕೆಯಲ್ಲಿ ಕುಸಿತವಾಗಿಲ್ಲ. ಪ್ರಸಕ್ತ ವರ್ಷಾಂತ್ಯಕ್ಕೆ ಮೊಬೈಲ್ ಗ್ರಾಹಕರ ಸಂಖ್ಯೆ 5 ಬಿಲಿಯನ್‌ಗೆ ತಲುಪುವ ಸಾಧ್ಯತೆಗಳಿವೆ ಎಂದು ಯುಎನ್ ಟೆಲಿಕಾಂ ಏಜೆನ್ಸಿ ಮೂಲಗಳು ತಿಳಿಸಿವೆ.
ವಿನೂತನ ಸೇವೆಗಳು ಮತ್ತು ಅತ್ಯಾಧುನಿಕ ಮೊಬೈಲ್ ಹ್ಯಾಂಡ್‌ಸೆಟ್‌ಗಳಿಂದಾಗಿ ಶ್ರೀಮಂತ ರಾಷ್ಟ್ರಗಳಲ್ಲಿ ಮೊಬೈಲ್ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಮೊಬೈಲ್ ಬ್ಯಾಂಕಿಂಗ್ ಮತ್ತು ಮೊಬೈಲ್ ಹೆಲ್ತ್-ಕೇರ್ ಸೇವೆಗಳಿಂದಾಗಿ ಬಡ ರಾಷ್ಟ್ರಗಳಲ್ಲಿ ಕೂಡಾ ಮೊಬೈಲ್ ಬೇಡಿಕೆಯಲ್ಲಿ ಏರಿಕೆಯಾಗಿದೆ ಎಂದು ಬಾರ್ಸಿಲೊನಾದಲ್ಲಿ ನಡೆದ ಟೆಲಿಕಾಂ ಏಜೆನ್ಸಿಗಳ ಸಂಘಟನೆ ತಿಳಿಸಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಕೂಡಾ ಮೊಬೈಲ್ ಬೇಡಿಕೆಯಲ್ಲಿ ಕುಸಿತವಾಗಿಲ್ಲ ಎಂದು ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯುನಿಯನ್‌ನ ಪ್ರಧಾನ ಕಾರ್ಯದರ್ಶಿ ಹಮಾಡೌನ್ ಟೌರೆ ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಕೂಡಾ ಹೆಚ್ಚಿನ ಗ್ರಾಹಕರು ಇಂಟರ್‌ನೆಟ್ ಬಳಕೆಗಾಗಿ ಮೊಬೈಲ್ ಬಳಸುತ್ತಿರುವುದರಿಂದ, ಮೊಬೈಲ್ ಬೇಡಿಕೆಯಲ್ಲಿ ನಿರಂತರ ಹೆಚ್ಚಳವಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷಾಂತ್ಯಕ್ಕೆ ಮೊಬೈಲ್ ಗ್ರಾಹಕರ ಸಂಖ್ಯೆ 4.6 ಬಿಲಿಯನ್‌ಗಳಿಗೆ ತಲುಪಿತ್ತು. 2010ರ ಅಂತ್ಯಕ್ಕೆ ಮೊಬೈಲ್ ಗ್ರಾಹಕರ ಸಂಖ್ಯೆ 5 ಬಿಲಿಯನ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯುನಿಯನ್ ತಿಳಿಸಿದೆ.
ಒಂದು ವೇಳೆ ನಿರಂತರವಾಗಿ ಮೊಬೈಲ್ ಬೇಡಿಕೆ ಮುಂದುವರಿದಲ್ಲಿ , ಮುಂಬರುವ ಐದು ವರ್ಷಗಳಲ್ಲಿ ಲ್ಯಾಪ್‌ಟ್ಯಾಪ್ ಕಂಪ್ಯೂಟರ್‌ಗಳಂತೆ ಮೊಬೈಲ್‌ಗಳಲ್ಲಿ ಇಂಟರ್‌ನೆಟ್ ಬಳಸುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಇಂಟರ್‌ನ್ಯಾಷನಲ್ ಟೆಲಿಕಮ್ಯೂನಿಕೇಶನ್ ಯುನಿಯನ್‌ನ ಪ್ರಧಾನ ಕಾರ್ಯದರ್ಶಿ ಹಮಾಡೌನ್ ಟೌರೆ ತಿಳಿಸಿದ್ದಾರೆ.