ಆರ್ಥಿಕ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಭಾರತೀಯ ಮೂಲದ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ಸರಕಾರ ನೀಡಿರುವ ರಿಯಾಯತಿಗಳನ್ನು, ಮುಂಬರುವ ಬಜೆಟ್‌ನಲ್ಲಿ ಕೂಡಾ ಮುಂದುವರಿಸುವ ನಿರೀಕ್ಷೆಯಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳ ಹಾಗೂ ಉದ್ಯೋಗ ಅವಕಾಶಗಳ ಸೃಷ್ಠಿಗಾಗಿ ತೆರಿಗೆ ರಿಯಾಯತಿಗಳನ್ನು ಮುಂದುವರಿಸುವುದು ಮಹತ್ವದ್ದಾಗಿದೆ.ಐಟಿ ಕ್ಷೇತ್ರ ನಿರಂತರವಾಗಿ ಚೇತರಿಕೆ ಕಾಣುತ್ತಿದೆ. ಆದ್ದರಿಂದ ತೆರಿಗೆ ರಿಯಾಯತಿ ಹಾಗೂ ಸೌಲಭ್ಯಗಳನ್ನು ಒದಗಿಸಿದಲ್ಲಿ ಸಹಕಾರಿಯಾಗುತ್ತದೆ ಎಂದು ಪೈಲಟ್ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಮಾರು 2.5 ಮಿಲಿಯನ್ ಉದ್ಯೋಗಿಗಳು ನೇರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರೋಕ್ಷವಾಗಿ 8 ಮಿಲಿಯನ್ ಉದ್ಯೋಗಿಗಳು ಐಟಿ ವಹಿವಾಟಿನ ಮೇಲೆ ಅವಲಂಬಿತರಾಗಿದ್ದಾರೆ. ಪ್ರಸಕ್ತ ವರ್ಷದಲ್ಲಿ ಒಂದು ಲಕ್ಷ ಉದ್ಯೋಗಿಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ ಎಂದು ಪೈಲಟ್ ಹೇಳಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ಜಾಗತಿಕ ಆರ್ಥಿಕ ಕುಸಿತದಿಂದಾಗಿ, ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಭಾರಿ ತೊಂದರೆಯನ್ನು ಎದುರಿಸಬೇಕಾಯಿತು. ಡಾಲರ್ ಮೌಲ್ಯ ಏರಿಕೆಯಿಂದಾಗಿ ಐಟಿ ಕ್ಷೇತ್ರ ಮತ್ತಷ್ಟು ಕುಸಿತ ಕಂಡಿತು ಎಂದು ಸಚಿವ ಸಚಿನ್ ಪೈಲಟ್ ತಿಳಿಸಿದ್ದಾರೆ.