ಅಹಾರ ಧಾನ್ಯ ವಸ್ತುಗಳ ದರಗಳಲ್ಲಿ ನಿಧಾನವಾಗಿ ಇಳಿಮುಖವಾಗುತ್ತಿದ್ದು,ಮುಂದಿನ ತಿಂಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಏತನ್ಮಧ್ಯೆ, ಮಾರ್ಚ್ ತಿಂಗಳ ಅವಧಿಯಲ್ಲಿ ವಾರ್ಷಿಕ ಹಣದುಬ್ಬರ ದರ ಶೇ.10ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ.
ದರ ಇಳಿಕೆಗಾಗಿ ಸರಕಾರ ನಿರಂತರ ಪ್ರಯತ್ನಿಸುತ್ತಿದ್ದರೂ ದರ ಏರಿಕೆ ಕಾಂಗ್ರೆಸ್ ನೇತೃತ್ವದ ಪಕ್ಷಕ್ಕೆ ಬೃಹತ್ ಸವಾಲಾಗಿ ಪರಿಣಮಿಸಿದೆ.ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ ತಿಂಗಳೊಳಗೆ ಬಡ್ಡಿ ದರಗಳನ್ನು ಏರಿಕೆ ಮಾಡುವ ಆತಂಕ ಸರಕಾರವನ್ನು ಕಾಡುತ್ತಿದೆ.
ಕಳೆದ ತಿಂಗಳು ಸರಕಾರ ಸಂಗ್ರಹಿಸಲಾದ ದವಸ ಧಾನ್ಯಗಳನ್ನು ಮಾರಾಟ ಮಾಡಲು ಹಾಗೂ ತೆರಿಗೆ ಮುಕ್ತ ಸಕ್ಕರೆಯನ್ನು ಅಮುದು ಮಾಡಿಕೊಳ್ಳಲು ಆದೇಶಿಸಿದೆ.ಅಹಾರ ಧಾನ್ಯಗಳ ದರಗಳು ಮುಂಬರುವ ಏಳರಿಂದ ಹತ್ತು ದಿನಗಳಲ್ಲಿ ಇಳಿಕೆಯಾಗಲಿದೆ ಎಂದು ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಅಹಾರ ಧಾನ್ಯಗಳ ದರ ಏರಿಕೆ ಶೇ.19.2ಕ್ಕೆ ತಲುಪಿತ್ತು. ನಂತರ ಜನೆವರಿ ತಿಂಗಳ ಅವಧಿಯಲ್ಲಿ ಅಲ್ಪಇಳಿಕೆ ಕಂಡು ಶೇ.17.4ಕ್ಕೆ ತಲುಪಿದೆ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.