ಯುರೋಪಿಯನ್ ಹಾಗೂ ಇತರ ರಾಷ್ಟ್ರಗಳಿಂದ ಬೇಡಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರಕೌಶಲ ವ್ಸತುಗಳ ರಫ್ತು ವಹಿವಾಟು ಸುಸ್ಥತಿಗೆ ಮರಳುತ್ತಿದ್ದು,2011-12ರ ವೇಳೆಗೆ 3.4 ಬಿಲಿಯನ್ ಡಾಲರ್‌ಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಳೆದ 2008-09ರ ಆರ್ಥಿಕ ಸಾಲಿನಲ್ಲಿ ಕರಕೌಶಲ ರಫ್ತು ವಹಿವಾಟಿನಲ್ಲಿ ಶೇ.48ರಷ್ಟು ಕುಸಿತ ಕಂಡು 1.7 ಬಿಲಿಯನ್ ಡಾಲರ್‌ಗಳಿಗೆ ಇಳಿಕೆಯಾಗಿತ್ತು. ಇದೀಗ ರಫ್ತು ವಹಿವಾಟಿನಲ್ಲಿ ಚೇತರಿಕೆ ಕಂಡುಬರುತ್ತಿದ್ದು, 3.4ಬಿಲಿಯನ್ ಡಾಲರ್‌ಗಳಿಗೆ ತಲುವುವ ವಿಶ್ವಾಸ ಹೊಂದಲಾಗಿದೆ ಎಂದು ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಫಾರ್ ಹ್ಯಾಂಡಿ ಕ್ರಾಫ್ಟ್ ಕಾರ್ಯಕಾರಿ ನಿರ್ದೇಶಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಸೆಪ್ಟಂಬರ್ 2008ರಿಂದ ರಫ್ತು ವಹಿವಾಟಿನಲ್ಲಿ ನಿಧಾನಗತಿಯ ಚೇತರಿಕೆ ಕಂಡುಬರುತ್ತಿದೆ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ನೂತನ ಬೇಡಿಕೆಗಳನ್ನು ಸಲ್ಲಿಸುತ್ತಿವೆ ಎಂದು ಕುಮಾರ್ ಹೇಳಿದ್ದಾರೆ.
ಭಾರತದ ಕರಕೌಶಲ ರಫ್ತು ವಹಿವಾಟಿನಲ್ಲಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ಶೇ.70ರಷ್ಟು ಪಾಲನ್ನು ಹೊಂದಿವೆ.ರಫ್ತು ವಹಿವಾಟುದಾರರು ಅಮೆರಿಕ,ಯುರೋಪ್ ರಾಷ್ಟ್ರಗಳನ್ನು ಹೊರತುಪಡಿಸಿ ಲ್ಯಾಟಿನ್ ಅಮೆರಿಕ, ಕೆರಿಬಿಯನ್, ಆಫ್ರಿಕಾ ರಾಷ್ಟ್ರಗಳಿಗೆ ವಹಿವಾಟು ವಿಸ್ತರಿಸುವತ್ತ ಗಮನಹರಿಸಿದ್ದಾರೆ ಎಂದು ರಾಕೇಶ್ ಕುಮಾರ್ ವಿವರಣೆ ನೀಡಿದ್ದಾರೆ.