ವರ್ಜಿನ್ ಮೊಬೈಲ್ ಟೆಲಿಕಾಂ ಕಂಪೆನಿ ಜಿಎಸ್‌ಎಂ ಸೇವೆಗಳನ್ನು, ದಕ್ಷಿಣ ಭಾರತ ಹಾಗೂ ಒರಿಸ್ಸಾ ರಾಜ್ಯದಲ್ಲಿ ಯಶಸ್ವಿಯಾಗಿ ಬಿಡುಗಡೆಗೊಳಿಸಿದ ನಂತರ ಮಹಾರಾಷ್ಟ್ರದ ಮುಂಬೈನಲ್ಲಿ ಜಿಎಸ್‌ಎಂ ಸೇವೆಯನ್ನು ಆರಂಭಿಸಿದೆ.
ಇದೀಗ ಮಹಾರಾಷ್ಟ್ರದ ಮುಂಬೈನಲ್ಲಿರುವ ವರ್ಜಿನ್ ಮೊಬೈಲ್ ಗ್ರಾಹಕರು, ಎಸ್‌ಟಿಡಿ ಹಾಗೂ ಸ್ಥಳೀಯ ಕರೆ ಪ್ರತಿ ನಿಮಿಷಕ್ಕೆ 20 ಪೈಸೆಯಂತೆ ಯಾವುದೇ ವರ್ಜಿನ್ ಮೊಬೈಲ್‌ಗೆ ಕರೆ ಮಾಡಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಜಿನ್ ಮೊಬೈಲ್ ಗ್ರಾಹಕರು ಇತರ ನೆಟ್‌ವರ್ಕ್‌ಗಳಿಗೆ, ಸ್ಥಳೀಯ ಕರೆ ಪ್ರತಿ ನಿಮಿಷಕ್ಕೆ 40 ಪೈಸೆ ಹಾಗೂ ಎಸ್‌ಟಿಡಿ ಕರೆ ಪ್ರತಿ ನಿಮಿಷಕ್ಕೆ 50 ಪೈಸೆಯಂತೆ ದರ ನಿಗದಿಪಡಿಸಲಾಗಿದೆ.
ವರ್ಜಿನ್ ಮೊಬೈಲ್‌ನ ಜಿಎಸ್‌ಎಂ ಸೇವೆ ಇದೀಗ 105 ನಗರಗಳಲ್ಲಿ ದೊರೆಯುತ್ತದೆ. ಸುಮಾರು 29,450 ಅಂಗಡಿಗಳಲ್ಲಿ ವರ್ಜಿನ್ ಮೊಬೈಲ್ ಸಿಮ್ ಮತ್ತು ಕರೆನ್ಸಿಗಳು ದೊರೆಯುತ್ತವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಎಸ್‌ಎಂಎಸ್ ಬಳಕೆದಾರರಿಗೆ 33 ರೂಪಾಯಿಗಳ ಹಾಗೂ 69 ರೂಪಾಯಿಗಳ ಪ್ಯಾಕ್‌ಗಳಿದ್ದು, 33 ರೂಪಾಯಿಗಳ ಪ್ಯಾಕ್‌ನಲ್ಲಿ 30 ದಿನಗಳ ಅವಧಿಗೆ ರಾಷ್ಟ್ರೀಯವಾಗಿ 2 ಸಾವಿರ ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. 69 ರೂಪಾಯಿಗಳ ಫ್ರೆಂಡ್ಲಿ ಪ್ಯಾಕ್‌ನಲ್ಲಿ, 30 ದಿನಗಳ ಅವಧಿಗೆ, 500 ಸ್ಥಳೀಯ ಹಾಗೂ ರಾಷ್ಟ್ರೀಯ ಎಸ್‌ಎಂಎಸ್‌ಗಳನ್ನು ಕಳುಹಿಸಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ.
ವರ್ಜಿನ್ ಮೊಬೈಲ್ ಕಂಪೆನಿ, ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಜೆನೆಲಿಯಾ ಡಿಸೋಜಾ ಅವರನ್ನು ಕಂಪೆನಿಯ ರಾಯಭಾರಿಗಳಾಗಿ ನೇಮಕ ಮಾಡಿದೆ.