ಸಕ್ಕರೆ ದರ ಏರಿಕೆ ನಿರಂತರವಾಗಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಬೇಡಿಕೆ ಹಾಗೂ ಪೂರೈಕೆಯ ಅಂತರವನ್ನು ಭರ್ತಿ ಮಾಡಲು ಶೀಘ್ರದಲ್ಲಿ 3-5 ಮಿಲಿಯನ್ ಟನ್ ಸಕ್ಕರೆಯನ್ನು ಅಮುದು ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಸರಕಾರಕ್ಕೆ ಕೋರಿದೆ.
ದೇಶದ ಸಕ್ಕರೆ ಬೇಡಿಕೆ ಹಾಗೂ ಪೂರೈಕೆಯಲ್ಲಿ ಕೊರತೆಯಿರುವುದರಿಂದ, ಕೂಡಲೇ ದೇಶಕ್ಕೆ ಅಗತ್ಯವಾದ 3ರಿಂದ 5 ಮಿಲಿಯನ್ ಟನ್ ಸಕ್ಕರೆಯನ್ನು ಅಮುದು ಮಾಡಿಕೊಳ್ಳಲು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಲಹಾ ಸಮಿತಿಯ ಮುಖ್ಯಸ್ಥ ಸಿ.ರಂಗರಾಜನ್ ಹೇಳಿದ್ದಾರೆ.
ಪ್ರಸಕ್ತ ವರ್ಷದ (ಅಕ್ಟೋಬರ್-ಸೆಪ್ಟೆಂಬರ್)ದೇಶದ ಸಕ್ಕರೆ ಸಂಗ್ರಹದಲ್ಲಿ, ಸುಮಾರು 2 ಮಿಲಿಯನ್ ಟನ್ ಸಕ್ಕರೆ ಕೊರತೆಯಿದ್ದು,ಹಿಂದಿನ ವರ್ಷಕ್ಕೆಹೋಲಿಸಿದಲ್ಲಿ 14 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆಯಲ್ಲಿ ಇಳಿಕೆಯಾಗಿದೆ.
2009-10ರಲ್ಲಿ ಕೇಂದ್ರ ಸರಕಾರ ದೇಶಕ್ಕೆ ಅಗತ್ಯವಾದ 22 ಮಿಲಿಯನ್ ಟನ್‌ಗಳಷ್ಟು ಸಕ್ಕರೆ ಉತ್ಪಾದನೆಯನ್ನು ನಿರೀಕ್ಷಿಸಿತ್ತು. ಆದರೆ ಸಕ್ಕರೆ ಉತ್ಪಾದನೆ 15.5 ಮಿಲಿಯನ್ ಟನ್‍ಗಳಿಗೆ ತಲುಪಿದ ಹಿನ್ನೆಲೆಯಲ್ಲಿ ಕೊರತೆಯನ್ನು ಎದುರಿಸುತ್ತಿದೆ.
ಸಕ್ಕರೆ ಉತ್ಪಾದನೆಯ ಕೊರತೆಯಿಂದಾಗಿ ಸಕ್ಕರೆ ಹಾಗೂ ಖಂಡಸಾರಿ ದರಗಳಲ್ಲಿ ಶೇ.51ರಷ್ಟು ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.