ದೇಶದ ಬೃಹತ್ ಸಾರ್ವಜನಿಕ ಸಂಸ್ಥೆಯಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2011ರಲ್ಲಿ ಸುಮಾರು 15ರಿಂದ 20ಸಾವಿರ ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಸಾಧ್ಯತೆ ಇರುವುದಾಗಿ ಎಸ್‌ಬಿಐ ಅಧ್ಯಕ್ಷ ಒ.ಪಿ.ಭಟ್ಟ ಶನಿವಾರ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 25ಸಾವಿರ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅದೇ ರೀತಿ ಮುಂದಿನ ಆರ್ಥಿಕ ವರ್ಷದಲ್ಲಿಯೂ ಒಟ್ಟಾರೆ 15ರಿಂದ 20ಸಾವಿರ ಜನರನ್ನು ಬ್ಯಾಂಕಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
2008-09ರಲ್ಲಿ ವಿವಿಧ ವಿಭಾಗಗಳಿಗಾಗಿ ಸುಮಾರು 27ಸಾವಿರ ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಅಲ್ಲದೇ ಈ ಸಾಲಿನ ಫೆಬ್ರುವರಿ ತಿಂಗಳಿನಲ್ಲಿ ಸುಮಾರು 2ಸಾವಿರ ಮಂದಿ ಪ್ರೊಬೆಷನರಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಬ್ಯಾಂಕ್ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.
ಇ-ಲರ್ನಿಂಗ್ ಪ್ಯಾಕೇಜ್ ಆಫ್ ಇಂಡಿಯನ್ ಇನ್ಸಿಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಮತ್ತು ಫೈನಾನ್ಸ್ ಅನ್ನು ಅನಾವರಣಗೊಳಿಸಿದ ನಂತರ ಭಟ್ಟ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.