ಬಜೆಟ್ ಮಂಡನೆಗೆ ಕೆಲವು ದಿನಗಳು ಮುಂದಿರುವಂತೆ,ಉತ್ತೇಜನ ಪ್ಯಾಕೇಜ್‌ಗಳನ್ನು ಒಂದೇ ಬಾರಿಗೆ ಮರಳಿ ಪಡೆದಲ್ಲಿ ಆರ್ಥಿಕಾಭಿವೃದ್ಧಿಗೆ ಮಾರಕವಾಗಲಿದೆ ಎಂದು ದೇಶದ ಪ್ರಮುಖ ಕಾರು ತಯಾರಿಕೆ ಸಂಸ್ಥೆಯ ಮಾರುತಿ ಸುಝುಕಿ ಆತಂಕ ವ್ಯಕ್ತಪಡಿಸಿದೆ.
ಒಂದು ವೇಳೆ ಏಕಕಾಲದಲ್ಲಿ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆದಲ್ಲಿ,ಆರ್ಥಿಕತೆ ಚೇತರಿಕೆಯಲ್ಲಿ ಕುಂಠಿತವಾಗಲಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ಮುಖ್ಯಸ್ಥ ಆರ್.ಸಿ ಭಾರ್ಗವಾ ಆಲ್‌ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಆಯೋಜಿಸಿದ ಸಮಾರಂಭದಲ್ಲಿ ತಿಳಿಸಿದ್ದಾರೆ.
ದೇಶದ ಕೈಗಾರಿಕೋದ್ಯಮದ ಆರ್ಥಿಕತೆ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲವಾದ್ದರಿಂದ, ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಮುಂದುವರಿಸುವುದು ಸೂಕ್ತ ಎಂದು ಹೇಳಿದ್ದಾರೆ.
ದೇಶದ ಆರ್ಥಿಕ ಅಭಿವೃದ್ಧಿ ಹಾಗೂ ಹಣಕಾಸಿನ ಸ್ಥಿರತೆಯನ್ನು ತರುವ ನೀತಿಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಸಮತೋಲನ ನೀತಿಯನ್ನು ಕಾಪಾಡಿಕೊಂಡು ಹೋಗಬೇಕಾಗಿದೆ ಎಂದು ಭಾರ್ಗವಾ ಸಲಹೆ ನೀಡಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಂಗಾಲಾದ ಕೈಗಾರಿಕೋದ್ಯಮಕ್ಕೆ ನೀಡಲಾದ ಉತ್ತೇಜನ ಪ್ಯಾಕೇಜ್‌ಗಳನ್ನು ಮುಂದುವರಿಸುವಂತೆ ವಿತ್ತ ಸಚಿವಾಲಯಕ್ಕೆ, ಭಾರಿ ಕೈಗಾರಿಕೋದ್ಯಮ ಸಚಿವ ವಿಲಾಸ್‌ರಾವ್ ದೇಶಮುಖ್ ಕೋರಿದ್ದಾರೆ.
ಮುಂಬರುವ ಕೆಲ ಸಮಯದವರೆಗೆ ವಾಹನೋದ್ಯಮ ಕ್ಷೇತ್ರಕ್ಕೆ ಉತ್ತೇಜನ ಪ್ಯಾಕೇಜ್‌ಗಳನ್ನು ಮುಂದುವರಿಸುವಂತೆ ಮನವಿ ಮಾಡಲಾಗಿದೆ ಎಂದು ಸಚಿವ ವಿಲಾಸ್‌ರಾವ್ ದೇಶಮುಖ್ ತಿಳಿಸಿದ್ದಾರೆ.