ಸಾಲ ನೀಡಿಕೆಯಲ್ಲಿ ಶೇ.15ರಷ್ಟು ಹೆಚ್ಚಳದ ನಿರೀಕ್ಷೆ:ಐಸಿಐಸಿಐ
ಮುಂಬೈ , ಸೋಮವಾರ, 22 ಫೆಬ್ರವರಿ 2010( 19:18 IST )
ದೇಶದ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್,ಮುಂಬರುವ ವರ್ಷದ ಆರ್ಥಿಕ ಸಾಲಿನಲ್ಲಿ ಸಾಲ ನೀಡಿಕೆಯಲ್ಲಿ ಶೇ.15ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಗೃಹಸಾಲ ಹಾಗೂ ವಾಹನೋದ್ಯಮ ಕ್ಷೇತ್ರದ, ಸಾಲ ನೀಡಿಕೆಯಲ್ಲಿ ಈಗಾಗಲೇ ಚೇತರಿಕೆಯನ್ನು ಕಂಡಿದೆ ಎಂದು ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೋಚರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ, ದೇಶಿಯ ಮಾರುಕಟ್ಟೆಯಲ್ಲಿ ಆರ್ಥಿಕತೆ ಕುಸಿದ ಹಿನ್ನೆಲೆಯಲ್ಲಿ, ಐಸಿಐಸಿಐ ಬ್ಯಾಂಕ್ ಸೇರಿದಂತೆ ಇತರ ಬ್ಯಾಂಕ್‌ಗಳು ಕೂಡಾ ವಹಿವಾಟಿನಲ್ಲಿ ಕುಸಿತ ಕಂಡಿದ್ದವು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಾಲ ನೀಡಿಕೆಯಲ್ಲಿ, ಶೇ.16ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ರಿಸರ್ವ್ ಬ್ಯಾಂಕ್ ಸಮೀಕ್ಷೆಯಲ್ಲಿ ಪ್ರಕಟಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರ್‌ಬಿಐ ಗುರಿಯನ್ನು ತಲುಪುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಸಧ್ಯಕ್ಕೆ ಠೇವಣಿಗಳ ಮೇಲೆ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆಗಳಿಲ್ಲ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೋಚರ್ ತಿಳಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳು, ಠೇವಣಿ ಬಡ್ಡಿದರಗಳಲ್ಲಿ ಶೇ.0.75ರಷ್ಟು ಬಡ್ಡಿ ದರವನ್ನು ಹೆಚ್ಚಿಸಿವೆ.