ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್, ಮುಂಬರುವ ವರ್ಷಾಂತ್ಯಕ್ಕೆ 2.2ಕೋಟಿ ಗ್ರಾಹಕರನ್ನು ಸೇರ್ಪಡೆಗೊಳಿಸಲು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಮೊಬೈಲ್ ಬ್ಯಾಂಕಿಂಗ್ ಮತ್ತು ಜಾಹೀರಾತು ಸೇವೆಯನ್ನು ಕೂಡಾ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.
2010-11ರ ಅವಧಿಯಲ್ಲಿ 20 ಮಿಲಿಯನ್ 2ಜಿ ಸಂಪರ್ಕ ಹಾಗೂ 2 ಮಿಲಿಯನ್ 3ಜಿ ಸಂಪರ್ಕಗಳನ್ನು ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಬಿಎಸ್‌ಎನ್‌ಎಲ್ ನಿರ್ದೇಶಕ ಆರ್.ಕೆ. ಅಗರ್‌ವಾಲ್ ತಿಳಿಸಿದ್ದಾರೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ 1.8 ಮಿಲಿಯನ್ ಗ್ರಾಹಕರ ಗುರಿಯನ್ನು ಹೊಂದಲಾಗಿತ್ತು. ಈಗಾಗಲೇ 1.4 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪಲಾಗಿದೆ. ಮೊಬೈಲ್ ಸೇವೆಯಲ್ಲಿ ಮಾರ್ಚ್ 31ಕ್ಕೆ ಅಂತ್ಯಗೊಂಡಂತೆ 10,500 ಕೋಟಿ ರೂಪಾಯಿಗಳಿಗೆ ತಲುಪಲಾಗಿದೆ ಎಂದು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಪ್ರಸ್ತುತ 8.5 ಲಕ್ಷ 3ಜಿ ಮೊಬೈಲ್ ಗ್ರಾಹಕರನ್ನು ಹೊಂದಿದ್ದು, ಮುಂದಿನ ಮಾಸಾಂತ್ಯಕ್ಕೆ 1ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸುವ ಸಾಧ್ಯತೆಗಳಿವೆ. 3ಜಿ ಗ್ರಾಹಕರ ಸರಾಸರಿ ಆದಾಯ ಶೇ.40ರಷ್ಟಾಗಿದ್ದು, 2ಜಿ ಗ್ರಾಹಕರಿಗಿಂತಲೂ ಹೆಚ್ಚಾಗಿದೆ ಎಂದು ಅಗರ್‌ವಾಲ್ ತಿಳಿಸಿದ್ದಾರೆ.
ಬಿಎಸ್‌ಎನ್‌ಎಲ್ ಸಂಸ್ಥೆ 3ಜಿ ಮೊಬೈಲ್ ಸೇವೆಯನ್ನು 318 ನಗರಗಳಲ್ಲಿ ಆರಂಭಿಸಿದ್ದು, ಮುಂಬರುವ ವರ್ಷಾಂತ್ಯಕ್ಕೆ 760 ನಗರಗಳಿಗೆ ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಪ್ರಸಕ್ತ 3ಜಿ ಮೊಬೈಲ್ ದರಗಳು 7 ಸಾವಿರ ರೂಪಾಯಿಗಳಿಂದ 8 ಸಾವಿರ ರೂಪಾಯಿಗಳಾಗಿದ್ದು, ಮುಂದಿನ ದಿನಗಳಲ್ಲಿ ನಾಲ್ಕು ಸಾವಿರ ರೂಪಾಯಿಗಳಿಗೆ ತಲುಪಲಿವೆ ಎಂದು ಅಗರ್‌ವಾಲ್ ಭವಿಷ್ಯ ನುಡಿದಿದ್ದಾರೆ.