ಗ್ರಾಹಕರಿಂದ ಯಾವುದೇ ದೂರುಗಳು ಲಭ್ಯವಾಗಿಲ್ಲವಾದರೂ ಪೆಟ್ರೋಲ್ ಕೊಳವೆಯಲ್ಲಿನ ತೊಂದರೆಯಿಂದಾಗಿ ಒಂದು ಲಕ್ಷ 'ಎ ಸ್ಟಾರ್' ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿಲಾಗಿದೆ ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪೆನಿಯ ಮೂಲಗಳ ಪ್ರಕಾರ, ಅಗಸ್ಟ್ 2009ಕ್ಕಿಂತ ಮೊದಲು ತಯಾರಿಸಲಾದ 'ಎ ಸ್ಟಾರ್' ಕಾರುಗಳನ್ನು ದೇಶದಲ್ಲಿ ಹಾಗೂ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದ್ದು, ಇಂಧನ ಸೋರಿಕೆಯಾಗದಂತೆ ಪೆಟ್ರೋಲ್ ಕೊಳವೆಯಲ್ಲಿರುವ ದೋಷಪೂರಿತ ರಬ್ಬರ್ ಗ್ಯಾಸ್‌ಕೆಟ್‌ಗಳನ್ನು ಬದಲಿಸಲು ನಿರ್ಧರಿಸಲಾಗಿದೆ.
ಮಾರುತಿ ಸುಝುಕಿ ಕಂಪೆನಿಯ ವಕ್ತಾರರು ಮಾತನಾಡಿ, ಮರುಮಾಹಿತಿ ಹಾಗೂ ಆಂತರಿಕ ಸಮೀಕ್ಷೆಯ ಆದಾರದ ಮೇಲೆ ಉತ್ಪನ್ನಗಳ ಗುಣಮಟ್ಟವನ್ನು ಅಳೆಯಲಾಗುತ್ತದೆ. ನವೆಂಬರ್ 2009ರಲ್ಲಿ ಕೂಡಾ ಇಂಧನ ಟ್ಯಾಂಕ್‌ನಲ್ಲಿ ದೋಷವಿದೆ ಎನ್ನುವ ಮಾಹಿತಿಯ ಹಿನ್ನೆಲೆಯಲ್ಲಿ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಡಿಸೆಂಬರ್ 2009ರಲ್ಲಿ ಗ್ಯಾಸ್‌ಕೆಟ್ ಬದಲಿಸಲು ಕಂಪೆನಿ ಆರಂಭಿಸಿದ್ದು, ಇಲ್ಲಿಯವರೆಗೆ 50 ಸಾವಿರ ಕಾರುಗಳ ಗ್ಯಾಸ್‌ಕೆಟ್‌ಗಳನ್ನು ಬದಲಿಸಲಾಗಿದೆ.
ಮಾರುತಿ ಸುಝುಕಿ ಕಂಪೆನಿ 2008 ನವೆಂಬರ್ 19 ರಂದು 998 ಸಿಸಿ ಕೆ10ಬಿ ಪೆಟ್ರೋಲ್ ಇಂಜಿನ್ ಹೊಂದಿರುವ 'ಎ ಸ್ಟಾರ್' ಕಾರುಗಳ ಉತ್ಪಾದನೆಯನ್ನು ಮನೇಸರ್ ಘಟಕದಿಂದ ಆರಂಭಿಸಿತ್ತು.