ಬಹುನಿರೀಕ್ಷಿತ 3ಜಿ ತರಂಗಾಂತರ ಹರಾಜು ದಿನಾಂಕ ಕೊನೆಗೂ ಹೊರಬಿದ್ದಿದೆ. ಕೇಂದ್ರ ಸರಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಹರಾಜಿಗಾಗಿ ಬಿಡ್‌ಗಳನ್ನು ಅಹ್ವಾನಿಸಿದೆ.
ಅಧಿಸೂಚನೆಯ ಪ್ರಕಾರ, ಬಿಡ್‌ದಾರರು 3ಜಿ ತರಂಗಾಂತರಗಳನ್ನು ಪಡೆಯಲು, 19ನೇ ಮಾರ್ಚ್‌ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸರಕಾರ 26ನೇ ಮಾರ್ಚ್ 2010ರಂದು ಬಿಡ್‌ದಾರರ ಹೆಸರುಗಳನ್ನು ಬಹಿರಂಗಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
3ಜಿ ತರಂಗಾಂತರ ಹರಾಜು ಅಂತಿಮವಾಗಿ ಏಪ್ರಿಲ್ 9 ರಂದು ಆರಂಭವಾಗಲಿದ್ದು, 3ಜಿ ತರಂಗಾಂತರ ಹರಾಜಿನ ಎರಡು ದಿನಗಳ ನಂತರ ಬಿಡಬ್ಲೂಎ ಹರಾಜು ನಡೆಸಲಾಗುವುದು ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.
3ಜಿ ತರಂಗಾಂತರ ಹರಾಜನ್ನು, ಈ ಮೊದಲು ಜನೆವರಿ 14 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ರಕ್ಷಣಾ ಇಲಾಖೆಯೊಂದಿಗಿನ ಭಿನ್ನಮತದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.
ಕೇಂದ್ರ ಸರಕಾರ, 3ಜಿ ಹರಾಜಿನಿಂದ ಸುಮಾರು 350 ಬಿಲಿಯನ್ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿದೆ ಎಂದು ಕೇಂದ್ರ ಟೆಲಿಕಾಂ ಖಾತೆ ಸಚಿವ ಎ.ರಾಜಾ ತಿಳಿಸಿದ್ದಾರೆ.