ವಾಷಿಂಗ್ಟನ್ , ಗುರುವಾರ, 25 ಫೆಬ್ರವರಿ 2010( 15:34 IST )
ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಶೇ.6.75ಕ್ಕೆ ತಲುಪುವ ಸಾಧ್ಯತೆಗಳಿದ್ದು, ಮುಂಬರುವ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.8ಕ್ಕೆ ಏರಿಕೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಸಮೀಕ್ಷಾ ವರದಿಯಲ್ಲಿ ಪ್ರಕಟಿಸಿದೆ.
2009-10ರ ಸಾಲಿನಲ್ಲಿ ಬರಗಾಲದಿಂದಾಗಿ ಶೇ.1ರಷ್ಟು ಕುಸಿತ ಕಾಣಲಿದ್ದು, ಕೃಷಿಯೇತರ ಜಿಡಿಪಿ ದರದಲ್ಲಿ ವೇಗದ ಚೇತರಿಕೆ ಕಾಣುವ ನಿರೀಕ್ಷೆಗಳಿವೆ ಎಂದು ಐಎಂಎಫ್ ಹೊರಡಿಸಿದ ಪ್ರಕಟಣೆಯಲ್ಲಿ ವಿವರಣೆ ನೀಡಿದೆ.
ಉತ್ತೇಜನ ಪ್ಯಾಕೇಜ್‌ಗಳು ಉತ್ತಮ ಆರ್ಥಿಕತೆ ಹಾಗೂ ಮೇಲ್ವಿಚಾರಣೆಗಳಿಂದಾಗಿ, ಆರ್ಥಿಕ ಸಂಸ್ಥೆಗಳು ಚೇತರಿಕೆಯತ್ತ ಮರಳುತ್ತಿವೆ ಎಂದು ಐಎಂಎಫ್ ಮೂಲಗಳು ತಿಳಿಸಿವೆ.
ಆದರೆ ಭಾರತದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ ಆರ್ಥಿಕ ವೃದ್ದಿ ದರ ಶೇ.7.5ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತ್ರೈಮಾಸಿಕ ಆರ್ಥಿಕ ನೀತಿ ಪರಿಷ್ಕರಣ ಸಭೆಯಲ್ಲಿ ಹೇಳಿಕೆ ನೀಡಿತ್ತು.
ವಿತ್ತ ಸಚಿವಾಲಯ ಮಧ್ಯಂತರ ಆರ್ಥಿಕ ಪರಿಷ್ಕರಣಾ ಸಭೆ ನಡೆಸಿ, ಜಿಡಿಪಿ ದರ ಶೇ.7.75ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.