ನವದೆಹಲಿ : , ಗುರುವಾರ, 25 ಫೆಬ್ರವರಿ 2010( 18:08 IST )
ಬಡ್ಡಿ ದರ ಹೆಚ್ಚಳವಾಗುವ ಸೂಚನೆಗಳಿಂದಾಗಿ, ದೇಶದ ಬೃಹತ್ ಖಾಸಗಿ ಬ್ಯಾಂಕಾದ ಐಸಿಐಸಿಐ ಬ್ಯಾಂಕ್, ಠೇವಣಿ ಬಡ್ಡಿ ದರಗಳಲ್ಲಿ ಶೇ.0.50ರಷ್ಟು ಏರಿಕೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.
ಇದರಿಂದಾಗಿ, 390 ದಿನಗಳ ಠೇವಣಿ ಬಡ್ಡಿ ದರ ಶೇ.6.75ಕ್ಕೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ ಠೇವಣಿ ಬಡ್ಡಿ ದರ ಶೇ.6.5ರಷ್ಟಾಗಿತ್ತು ಎಂದು ಐಸಿಐಸಿಐ ಬ್ಯಾಂಕ್‌ನ ವಕ್ತಾರರು ತಿಳಿಸಿದ್ದಾರೆ.
590 ದಿನಗಳ ಅವಧಿಯ ಠೇವಣಿ ಬಡ್ಡಿ ದರದಲ್ಲಿ ಕೂಡಾ ಶೇ.6.25ರಿಂದ ಶೇ.6.75ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದ ಎಚ್‌ಡಿಎಫ್‌ಸಿ ಬ್ಯಾಂಕ್, ಠೇವಣಿ ಬಡ್ಡಿದರದಲ್ಲಿ ಶೇ.1.5ರಷ್ಟು ಏರಿಕೆ ಮಾಡಿದ ಹಿನ್ನೆಲೆಯಲ್ಲಿ, ಐಸಿಐಸಿಐ ಬ್ಯಾಂಕ್ ಕೂಡಾ ಠೇವಣಿ ಬಡ್ಡಿ ದರದಲ್ಲಿ ಹೆಚ್ಚಳ ಘೋಷಿಸಿದೆ.
ಕಳೆದ ತಿಂಗಳು ಸರಕಾರಿ ಸ್ವಾಮ್ಯದ ಐಡಿಬಿಐ ಬ್ಯಾಂಕ್, ಠೇವಣಿ ಬಡ್ಡಿ ದರಗಳಲ್ಲಿ ಶೇ.0.25ರಷ್ಟು ಏರಿಕೆ ಮಾಡಿದೆ.
ದೇಶದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ಚಿನ ನಗದು ಹರಿವು ಲಭ್ಯವಿರುವುದರಿಂದ ಮುಂದಿನ ಜೂನ್ ತಿಂಗಳ ಅವಧಿಯವರೆಗೆ ಠೇವಣಿ ಹಾಗೂ ಸಾಲದ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಉದ್ದೇಶವಿಲ್ಲ ಎಂದು ಬ್ಯಾಂಕ್ ಮುಖ್ಯಸ್ಥ ಒ.ಪಿ. ಭಟ್ ತಿಳಿಸಿದ್ದಾರೆ.
ಕಳೆದ ತಿಂಗಳು ಆರ್‌ಬಿಐ ನಡೆಸಿದ ಪರಿಷ್ಕರಣ ಸಭೆಯಲ್ಲಿ ಆರ್ಥಿಕ ನೀತಿಗಳನ್ನು ಬಿಗಿಗೊಳಿಸಿ, ಬ್ಯಾಂಕ್‌ಗಳಿಂದ ನಗದು ಹರಿವನ್ನು ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳಿಂದಾಗಿ ಬ್ಯಾಂಕ್‌ಗಳು ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ ಘೋಷಿಸುತ್ತಿವೆ.