ಚಿನ್ನ, ಬೆಳ್ಳಿ, ಪ್ಲಾಟಿನಂ ಖರೀದಿಸುವವರ ಮೇಲೆ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಈ ಬಾರಿಯೂ ಮುನಿಸಿಕೊಂಡಿದ್ದಾರೆ. ಪರಿಣಾಮ ಮುಂದಿನ ದಿನಗಳಲ್ಲಿ ಈ ದುಬಾರಿ ಲೋಹಗಳು ಕೈಗೆಟುಕದಷ್ಟು ದುಬಾರಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಕಳೆದ ಬಾರಿಯೂ ದುಬಾರಿ ಲೋಹದ ಮೇಲೆ ಕಣ್ಣಿಟ್ಟಿದ್ದ (100 ರೂಪಾಯಿ ಇದ್ದದ್ದು 200 ರೂಪಾಯಿಯಾಗಿತ್ತು) ಮುಖರ್ಜಿಯವರು ಈ ಬಾರಿ ಪ್ರತೀ 10 ಗ್ರಾಂ ಚಿನ್ನದ ಗಟ್ಟಿಯ ಆಮದಿನ ಮೇಲೆ 100 ರೂಪಾಯಿ ಸೀಮಾ ಸುಂಕ ಹೆಚ್ಚಿಸಿದ್ದು, ತೆರಿಗೆಯನ್ನು 200 ರೂಪಾಯಿಗಳಿಂದ 300 ರೂಪಾಯಿಗಳಿಗೆ ಹೆಚ್ಚಳಗೊಳಿಸಿದ್ದಾರೆ.
ಚಿನ್ನದ ಇತರ ಪ್ರಕಾರಗಳ ಮೇಲಿನ ಸೀಮಾ ಸುಂಕವನ್ನು ಪ್ರತೀ 10 ಗ್ರಾಂಗಳಿಗೆ 500 ರೂಪಾಯಿಗಳಿಂದ 750 ರೂಪಾಯಿಗಳಿಗೆ ಏರಿಸಲಾಗಿದೆ.
ಪ್ಲಾಟಿನಂ ಮೇಲಿನ ಆಮದು ಸುಂಕವನ್ನು ಕೂಡ 100 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತೀ 10 ಗ್ರಾಂ ಪ್ಲಾಟಿನಂ ಆಮದಿನ ಮೇಲೆ ಇನ್ನು ಮುಂದೆ 300 ರೂಪಾಯಿ ಆಮದು ಸುಂಕ ನೀಡಬೇಕಾಗುತ್ತದೆ.
ಬೆಳ್ಳಿ ದರದಲ್ಲೂ ಇದೇ ವಿಧಾನವನ್ನು ಅನುಸರಿಸಲಾಗಿದೆ. ಪ್ರತೀ ಕೇಜಿ ಬೆಳ್ಳಿ ಗಟ್ಟಿ ಆಮದು ಮೇಲಿನ ಸೀಮಾ ಸುಂಕವನ್ನು 1,000 ರೂಪಾಯಿಗಳಿಂದ 1,500 ರೂಪಾಯಿಗಳಿಗೆ (500 ರೂಪಾಯಿ ಏರಿಕೆ) ಹೆಚ್ಚಿಸಲಾಗಿದೆ. ಕಳೆದ ಬಾರಿ 500 ರೂಪಾಯಿ ಇದ್ದುದನ್ನು 1000ಕ್ಕೆ ಏರಿಕೆ ಮಾಡಲಾಗಿತ್ತು.
ಆಭರಣಗಳನ್ನು ಪಾಲಿಶ್ ಮಾಡಲು ಬಳಸುವ ದುಬಾರಿ ಲೋಹ ರೋಡಿಯಂ ಮೇಲಿನ ತೆರಿಗೆಯನ್ನು ಶೇ.10ರಿಂದ ಶೇ.2ಕ್ಕೆ ಇಳಿಕೆಗೊಳಿಸಲಾಗುತ್ತದೆ ಎಂದು ಹೇಳಿರುವುದು ಮಾತ್ರ ಆಭರಣ ವ್ಯಾಪಾರಿಗಳಿಗೆ ಸಂತಸ ತಂದಿರುವ ಚಿಕ್ಕ ಅಂಶ.
ಆಮದು ಸುಂಕ ಹೆಚ್ಚಳ ಅದು ವೈಯಕ್ತಿಕವಾಗಿ ಖರೀದಿಸುವ ಆಭರಣ ಚಿನ್ನಕ್ಕೂ ಅನ್ವಯಿಸುತ್ತದೆ.