ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ತೆರಿಗೆಯದ್ದೇ ಅರ್ಧ ಪಾಲು (Petrol | Diesel | State Tax | Price Rise | Fuel Price | Taxes in India)
Bookmark and Share Feedback Print
 
ಪೆಟ್ರೋಲ್ ಬೆಲೆ ಲೀಟರಿಗೆ ಐವತ್ತು ರೂಪಾಯಿವರೆಗೂ ಏರಿದ್ದರೂ, ಇದರಲ್ಲಿ ಅರ್ಧಕ್ಕರ್ಧ ಪೆಟ್ರೋಲ್ ಬೆಲೆ ಅಲ್ಲ, ಬದಲಾಗಿ ತೆರಿಗೆಯ ಹೊರೆ ಎಂಬುದು ನಿಮಗೆ ಗೊತ್ತೇ? ಬಜೆಟ್ 2010-11ರಲ್ಲಿ ವಿತ್ತ ಸಚಿವರು ಅಬಕಾರಿ ಸುಂಕ ಏರಿಕೆ ಪ್ರಕಟಿಸಿದ ತಕ್ಷಣವೇ ರಾಜಧಾನಿ ದೆಹಲಿಯಲ್ಲಿ ಮತ್ತು ದೇಶಾದ್ಯಂತ ಪೆಟ್ರೋಲ್ ಬೆಲೆಯನ್ನೂ ದಿಢೀರ್ ಆಗಿ ಏರಿಸಲಾಗಿತ್ತು.

ಇತ್ತೀಚೆಗಿನ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ 1 ರೂಪಾಯಿ ಮತ್ತು ಆಮದು ಸುಂಕವನ್ನು ಶೇ.2.5ರಿಂದ ಶೇ.7.5ಕ್ಕೆ ಏರಿಸಿದ್ದರು. ತತ್ಪರಿಣಾಮವಾಗಿ, ಚಿಲ್ಲರೆ ಮಾರಾಟದಲ್ಲಿ ಶೇ.12.7ರಷ್ಟು ಬೆಲೆ ಏರಿಕೆಯಾಯಿತು.

ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ನ ಚಿಲ್ಲರೆ ಮಾರಾಟ ದರವಾದ 47.43 ರೂಪಾಯಿಯಲ್ಲಿ ಕೇಂದ್ರೀಯ ಮತ್ತು ರಾಜ್ಯಗಳ ತೆರಿಗೆಯೇ ಶೇ.51.5 ಅಂದರೆ 24.41 ರೂ.! ಇದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಂಪನ್ಮೂಲ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರೇ ರಾಜ್ಯಸಭೆಗೆ ನೀಡಿದ ಮಾಹಿತಿ.

ಫೆಬ್ರವರಿ 26ರಂದು ಬೆಲೆ ಏರಿಕೆಗೆ ಮುನ್ನ, ಪೆಟ್ರೋಲ್ ಚಿಲ್ಲರೆ ಮಾರಾಟ ಬೆಲೆ 44.72 ರೂ. ಆಗಿದ್ದಾಗ, ಅದರಲ್ಲಿ ಕಸ್ಟಮ್ಸ್, ಅಬಕಾರಿ ಸುಂಕಗಳು ಮತ್ತು ರಾಜ್ಯದ ತೆರಿಗೆಗಳು ಸೇರಿ 21.65 ರೂ. ಆಗಿತ್ತು.

ಡೀಸೆಲ್ ಬಗ್ಗೆ ಹೇಳುವುದಾದರೆ, ದೆಹಲಿಯಲ್ಲಿ ಈಗಿನ ಚಿಲ್ಲರೆ ಮಾರಾಟ ದರವಾದ ಲೀಟರಿಗೆ 35.47 ರೂ.ಗಳಲ್ಲಿ, ತೆರಿಗೆಗಳ ಒಟ್ಟು ಪಾಲು 10.73 ರೂ. ಅಂದರೆ ಶೇ.30.25.

ಇದಕ್ಕೆ ಮೊದಲು, ಡೀಸೆಲ್ ಲೀಟರಿಗೆ 32.92 ರೂ. ಇದ್ದಾಗ, ತೆರಿಗೆಗಳ ಪಾಲು ಕಾಲು ಭಾಗವಿತ್ತು ಅಂದರೆ 8.11 ರೂ. ಬಜೆಟಿನಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಲೀಟರೊಂದಕ್ಕೆ 2.71 ರೂ. ಹಾಗೂ ಡೀಸೆಲ್ ಲೀಟರೊಂದಕ್ಕೆ 2.55 ರೂ. ಹೆಚ್ಚಳವಾಗಿತ್ತು.

ಒಂದು ಲೀಟರ್ ಪೆಟ್ರೋಲ್ ಚಿಲ್ಲರೆ ಮಾರಾಟದಲ್ಲಿ ಕೇಂದ್ರೀಯ ತೆರಿಗೆಗಳೆಂದರೆ ಕಸ್ಟಮ್ಸ್ ಸುಂಕ 1.73 ರೂ., ಅಬಕಾರಿ ಸುಂಕ 14.78 ರೂ. ಆಗಿದ್ದರೆ, ಉಳಿದದ್ದು ರಾಜ್ಯದ ತೆರಿಗೆಗಳು (ದೆಹಲಿಯಲ್ಲಿ 7.90 ರೂ.). ಅಂತೆಯೇ, ಡೀಸೆಲ್ ಲೀಟರೊಂದಕ್ಕೆ 1.80 ರೂ. ಆಮದು ಸುಂಕ, 4.74 ರೂ. ಅಬಕಾರಿ ಸುಂಕ ಹಾಗೂ ಉಳಿದದ್ದು ರಾಜ್ಯದ ತೆರಿಗೆಗಳು (ದೆಹಲಿಯಲ್ಲಿ 4.19 ರೂ.).
ಸಂಬಂಧಿತ ಮಾಹಿತಿ ಹುಡುಕಿ