ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಒಪ್ಪಿಗೆಯಿಲ್ಲದೆ ಹೊಸ 'ಯುಲಿಪ್' ಜಾರಿಯಿಲ್ಲ: ಸೆಬಿ (Insurance | SEBI | IRDA)
Bookmark and Share Feedback Print
 
ವಿಮಾ ಕಂಪನಿಗಳು ತನ್ನ ಒಪ್ಪಿಗೆಯಿಲ್ಲದೆ ನೂತನ ಯುನಿಟ್ ಲಿಂಕ್ಡ್ ವಿಮಾ ಯೋಜನೆ (ಯುಲಿಪ್)ಗಳನ್ನು ಜಾರಿಗೊಳಿಸುವಂತಿಲ್ಲ ಎಂದು ಭಾರತೀಯ ಶೇರು ನಿಯಂತ್ರಣ ಮಂಡಳಿ ಸೆಬಿ ಸ್ಪಷ್ಟಪಡಿಸಿದೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಜತೆಗಿನ ಬೀದಿ ಜಗಳದಲ್ಲಿ, ಸೆಬಿ ಈ ಹಿಂದೆ 14 ಜೀವವಿಮಾ ಸಂಸ್ಥೆಗಳ ಯುಲಿಪ್ ಯೋಜನೆಗಳನ್ನು ನಿಷೇಧಿಸಿತ್ತು.

ಅಲ್ಲದೆ ಯುಲಿಪ್ ವ್ಯವಹಾರಗಳನ್ನು ನಡೆಸಬಾರದೆಂದು 14 ಕಂಪನಿಗಳ ಯೋಜನೆಗಳ ಮೇಲೆ ಶುಕ್ರವಾರ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡಿರುವುದು ತಕ್ಷಣದ ಕ್ರಮ ಮಾತ್ರವಾಗಿದ್ದು, ಜೀವವಿಮಾ ಕಂಪನಿಗಳು ಪ್ರಸಕ್ತ ಹೊಂದಿರುವ ಯುಲಿಪ್ ಯೋಜನೆಗಳನ್ನು ಮುಂದುವರಿಸಬಹುದು. ಆದರೆ ನೂತನ ಯೋಜನೆಗಳನ್ನು ಸೆಬಿಯಲ್ಲಿ ನೋಂದಣಿ ಮಾಡಿ, ಅನುಮತಿ ಪಡೆಯದ ಹೊರತು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೇಂದ್ರ ಸರಕಾರದ ಮಧ್ಯ ಪ್ರವೇಶದ ನಂತರ 14 ಜೀವವಿಮಾ ಕಂಪನಿಗಳ ಯೋಜನೆಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ಸೆಬಿ ವಾಪಸ್ ಪಡೆದುಕೊಂಡಿತ್ತಾದರೂ, ಏಪ್ರಿಲ್ 9ರ ನಂತರ ಜಾರಿಗೆ ಬಂದಿರುವ ಯುಲಿಪ್ ಯೋಜನೆಗಳಿಗೆ ತನ್ನ ನಿಷೇಧ ಅನ್ವಯವಾಗುತ್ತದೆ ಎಂದು ಸೆಬಿ ಹೇಳಿದ್ದು, ಆ ನಂತರ ಅನುಮತಿಯಿಲ್ಲದೆ ಆರಂಭಿಸುವ ಎಲ್ಲಾ ಯುಲಿಪ್ ಯೋಜನೆಗಳೂ ನಿಷಿದ್ಧ ಎಂದು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಎಚ್‌ಡಿಎಫ್‌ಸಿ, ಐಎನ್‌ಜಿ ವೈಶ್ಯ, ಎಸ್‌ಬಿಐ ಲೈಫ್, ಐಸಿಐಸಿಐ ಪ್ರುಡೆನ್ಸಿಯಲ್, ಟಾಟಾ ಎಐಜಿ, ರಿಲಯೆನ್ಸ್ ಸೇರಿದಂತೆ ಒಟ್ಟು 14 ವಿಮಾ ಸಂಸ್ಥೆಗಳು ಯುಲಿಪ್ ಯೋಜನೆಗಳ ಮೂಲಕ ಹಣ ಸಂಗ್ರಹಿಸುವುದಕ್ಕೆ ಸೆಬಿ ನಿಷೇಧ ಹೇರಿತ್ತು. ಪ್ರಕರಣವೀಗ ನ್ಯಾಯಾಲಯಕ್ಕೂ ಹೋಗಿದ್ದು, ಕೆಲವೇ ಸಮಯದಲ್ಲಿ ವಿವಾದ ತಹಬದಿಗೆ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೆಬಿ, ಐಆರ್ಡಿಎ, ವಿಮೆ