ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸೂಪರ್ ಸ್ಪೆಷಾಲಿಟಿ ಇಎಸ್ಐ ಆಸ್ಪತ್ರೆಯಲ್ಲಿ ಎಲ್ಲರಿಗೂ ಸೇವೆ: ಖರ್ಗೆ (Super Speciality ESI Hospital | Gulbarga | Kharge | Karnataka)
Bookmark and Share Feedback Print
 
ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ 790 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೂಪರ್ ಸ್ಪೆಷಾಲಿಟಿ ಇಎಸ್ಐ ಆಸ್ಪತ್ರೆಯಲ್ಲಿ ವಿಮೆ ಫಲಾನುಭವಿಗಳ ಜತೆಗೆ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದ್ದಾರೆ.

ಗುಲ್ಬರ್ಗ ವಿಭಾಗದ ಜತೆಗೆ ಮುಂಬೈ ಕರ್ನಾಟಕದ ಜಿಲ್ಲೆಗಳೂ ಈ ಆಸ್ಪತ್ರೆ ಲಾಭ ಪಡೆದುಕೊಳ್ಳಬಹುದಾಗಿದೆ. ಯಾವ ಆಸ್ಪತ್ರೆಯಲ್ಲಿ ಒತ್ತಡ ಕಡಿಮೆ ಇದೆ, ಹಾಸಿಗೆಗಳು ಖಾಲಿ ಉಳಿಯುತ್ತವೆಯೋ ಅಂತಹ ಸಂದರ್ಭದಲ್ಲಿ ಫಲಾನುಭವಿಗಳಲ್ಲದವರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಎಸ್ಐ ಕಾಯಿದೆಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.

ಗುಲ್ಬರ್ಗ ವಿವಿ ವ್ಯಾಪ್ತಿಯ 30 ಎಕರೆ ವಿಶಾಲ ಪ್ರದೇಶದಲ್ಲಿ ಇಎಸ್ಐ ಆಸ್ಪತ್ರೆ, ಮೆಡಿಕಲ್, ಡೆಂಟಲ್, ನರ್ಸಿಂಗ್ ಕಾಲೇಜುಗಳು ತಲೆ ಎತ್ತಲಿವೆ. ಕಟ್ಟಡ ನಿರ್ಮಾಣಕ್ಕೆ 790 ಕೋಟಿ ರೂ., ಉಪಕರಣ ಖರೀದಿ ಇತ್ಯಾದಿ ಖರ್ಚು ಸೇರಿದಂತೆ ಒಟ್ಟು ಸುಮಾರು 900 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎಂದರು.

ಕೇಂದ್ರ ಸರಕಾರದಲ್ಲಿ ಕಾರ್ಮಿಕ ಖಾತೆಯ ಮಂತ್ರಿಯಾದ ಒಂದು ವರ್ಷದ ಅವಧಿಯಲ್ಲಿ ಗುಲ್ಬರ್ಗಕ್ಕೆ ಒಂದು ಬಹುದೊಡ್ಡ ಕೊಡುಗೆ ನೀಡಲು ತೀರ್ಮಾನಿಸಿದ್ದೆ. ಹೀಗಾಗಿ ಬೃಹತ್ ಇಎಸ್ಐ ಆಸ್ಪತ್ರೆ ಒದಗಿಸಲಾಗಿದೆ. 30 ತಿಂಗಳ ಅವಧಿಯಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡು ಚಟುವಟಿಕೆ ಆರಂಭಿಸಲಿದೆ ಎಂದು ಅವರು ತಿಳಿಸಿದ್ದಾರೆ.

8 ಮಹಡಿ ಕಟ್ಟಡ ತಲೆ ಎತ್ತಲಿದೆ. ಪ್ರತಿ ವರ್ಷ 30 ಸಾವಿರ ವೈದ್ಯರು ಕೋರ್ಸ್ ಮುಗಿಸುತ್ತಿದ್ದರೂ ಇನ್ನೂ ಅನೇಕ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಆದರೂ ಇಎಸ್ಐ ಆಸ್ಪತ್ರೆಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಶೇ.40 ಕೇಂದ್ರ, ಶೇ.40 ರಾಜ್ಯ ಸರಕಾರ, ಶೇ.10 ಉದ್ಯೋಗದಾತರು, ಶೇ.10 ನೌಕರರಿಗೆ ಮೀಸಲು ಇರಿಸಲಾಗುತ್ತಿದೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ