ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸುವರ್ಣ ವಸ್ತ್ರ ನೀತಿ: ತರಬೇತಿಗೆ 2000 ರೂ. ಶಿಷ್ಯವೇತನ (Suvarna Vastra Neeti | Karnataka | Goolihatti Shekhar | Textile Minister)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜವುಳಿ ಇಲಾಖೆ ಮೂಲಕ ಜಾರಿಗೆ ತಂದ ಸುವರ್ಣ ವಸ್ತ್ರ ನೀತಿಯಿಂದ ರಾಜ್ಯದಲ್ಲಿ ಮಹತ್ತರ ಬದಲಾವಣೆ ಆಗಿದೆ ಎಂದು ರಾಜ್ಯ ಜವುಳಿ ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಗೂಳಿಹಟ್ಟಿ ಡಿ. ಶೇಖರ್ ಹೇಳಿದರು.

ಯೋಜನೆ ಜಾರಿಗೆ ಆರಂಭಿಕ 500 ಕೋಟಿ ರೂ. ಅನುಮೋದನೆ ನೀಡಿದ ಮುಖ್ಯಮಂತ್ರಿಯವರು ಯೋಜನೆಯನ್ನು 176 ತಾಲೂಕುಗಳಲ್ಲಿ ಸಮಗ್ರವಾಗಿ ಜಾರಿಗೆ ತರುವ ಪ್ರಯತ್ನದಲ್ಲಿ ಸಫಲತೆ ಕಂಡುಕೊಳ್ಳಲಾಗಿದೆ ಎಂದರು. ಆರು ತಿಂಗಳ ತರಬೇತಿಯಲ್ಲಿ ಗುಡ್ಡಗಾಡು ಪ್ರದೇಶದ ಯುವಕ, ಯುವತಿಯರು ಹೆಚ್ಚಾಗಿ ತೊಡಗಿಸಿಕೊಂಡಿರುವುದಲ್ಲದೆ ಅವರಿಗೊಂದು ಉದ್ಯೋಗ ಭದ್ರತೆ ಲಭಿಸಿದೆ. ತರಬೇತಿ ಪಡೆಯುವವರಿಗೆ ಮಾಸಿಕ 2000 ರೂ. ಶಿಷ್ಯವೇತನ ನೀಡಲಾಗುತ್ತದೆ. ರಾಜ್ಯ ಸರಕಾರದ ಬೇರಾವ ಇಲಾಖೆಯಲ್ಲಿಯೂ ಶಿಷ್ಯವೇತನ ನೀಡುವ ಕ್ರಮ ಇಲ್ಲ.

ಜವುಳಿ ಇಲಾಖೆ ಲಾಭದಾಯಕ ಅಲ್ಲ ಎಂಬ ಅಭಿಪ್ರಾಯ ಈಗ ತೊಡೆದು ಹಾಕಲಾಗಿದೆ. ಪ್ರಮುಖವಾಗಿ ಗುಡ್ಡಗಾಡು ಜನರ ಬದುಕಿನ ಅಭ್ಯುದಯಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಸುವರ್ಣವಸ್ತ್ರ ನೀತಿ ಯೋಜನೆಯಡಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ತೆರೆಯಲಾದ ಕೈಮಗ್ಗ ತರಬೇತಿ ಕೇಂದ್ರ ಜನರ ವಿಶ್ವಾಸ ವೃದ್ಧಿಸಿದೆ. ಚಿಕ್ಕಮಗಳೂರು, ಚಾಮರಾಜನಗರ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಕೇಂದ್ರಗಳು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದವರು ಹೇಳಿದರು.

ತರಬೇತಿ ಪಡೆದವರಿಗೆ ಮನೆ ಕಟ್ಟಲು ಸಹಾಯಧನ ಅಲ್ಲದೆ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಕೇಂದ್ರದಲ್ಲಿ ತಯಾರಾದ ಬಟ್ಟೆಗಳನ್ನು ವಿಕ್ರಯಿಸಲು ಸರಕಾರವೇ ಮಾರುಕಟ್ಟೆ ವ್ಯವಸ್ಥೆ ರೂಪಿಸುತ್ತಿದೆ. ಕೊಲ್ಲೂರಿನಲ್ಲಿ ಮೇ 28ರಂದು ಪ್ರಿಯದರ್ಶಿನಿ ಹ್ಯಾಂಡ್ಲೂಮ್ ಆರಂಭಗೊಂಡಿದೆ. ಇದೊಂದು ನಿರಂತರ ಪ್ರಕ್ರಿಯೆ ಆಗಬೇಕೆಂಬುವುದು ನನ್ನ ಆಶಯ ಎಂದು ಅವರು ವಿವರಿಸಿದರು. ಬೈಂದೂರು ಕ್ಷೇತ್ರದ ನಾಲ್ಕು ಕಡೆ ಕೈಮಗ್ಗ ತರಬೇತಿ ಕೇಂದ್ರ ಆರಂಭಿಸಲಾಗಿದೆ ಎಂದಿದ್ದಾರೆ.

ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿಯೂ ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಜವುಳಿ ಇಲಾಖೆಯ ಕಾರ್ಯವೈಖರಿ ಗುರುತಿಸುವಂತಹ ಕೆಲಸ ಏನಾದರೂ ಆಗಿದ್ದರೆ ಅದು ಬಿಜೆಪಿ ಸರಕಾರದ ವತಿಯಿಂದ ಮಾತ್ರ ಎಂದು ಸಮರ್ಥಿಸಿಕೊಂಡ ಅವರು, ಗುಡ್ಡಗಾಡು ಜನರ ಏಳ್ಗೆಗೆ ಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ