ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಾಜ್ಯಕ್ಕೆ 4 ಲಕ್ಷ ಕೋಟಿ ಬಂಡವಾಳ; 8.65ಲಕ್ಷ ಉದ್ಯೋಗ ಸೃಷ್ಟಿ (Bangalore | Yeddyurappa | Karnataka | Laxmi mitthal | Congress)
Bookmark and Share Feedback Print
 
ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಸಂಕಲ್ಪತೊಟ್ಟು ವಿಶ್ವಬಂಡವಾಳ ಹೂಡಿಕೆದಾರರಿಗೆ ರೆಡ್ ಕಾರ್ಪೆಟ್ ಆಹ್ವಾನ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭರ್ಜರಿ ಬಂಡವಾಳದ ಬೇಟೆ ನಡೆಸಿದೆ. ಎರಡು ದಿನ ನಡೆದ ಸಮಾವೇಶದಲ್ಲಿ ಒಟ್ಟು 352 ಒಡಂಬಡಿಕೆಗೆ ರಾಜ್ಯ ಸರ್ಕಾರ ಸಹಿ ಹಾಕಿದ್ದು, 8.65ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಎರಡು ದಿನಗಳ ಕಾಲ ಉದ್ಯಾನನಗರಿಯ ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಶುಕ್ರವಾರ ಮುಕ್ತಾಯಗೊಂಡ ನಂತರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೊದಲ ದಿನ ಎರಡುವರೆ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗಾಗಿ ದೇಶ-ವಿದೇಶ ಕಂಪನಿಗಳ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇಂದು ಮುಕ್ತಾಯಗೊಂಡ ಎರಡನೇ ದಿನದ ಸಮಾವೇಶದಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ವಿವರಿಸಿದರು.

ಎರಡು ದಿನಗಳ ಕಾಲ ನಡೆದ ಈ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ರಾಜ್ಯಕ್ಕೆ ಒಟ್ಟು ನಾಲ್ಕು ಲಕ್ಷ ಕೋಟಿ ರೂಪಾಯಿ ಬೃಹತ್ ಬಂಡವಾಳ ಹರಿದು ಬಂದಿದ್ದು, ಇದರಿಂದ ಸುಮಾರು 8.65ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಯಡಿಯೂರಪ್ಪ ತಿಳಿಸಿದರು.

ವಿಶ್ವದ ಖ್ಯಾತ ಉದ್ಯಮಿಗಳಾದ ಲಕ್ಷ್ಮಿ ಮಿತ್ತಲ್, ಬಿರ್ಲಾ ಸೇರಿದಂತೆ ವಿಪ್ರೋ, ಇನ್ಫೋಸಿಸ್, ಬಾಷ್ ಕಂಪನಿ, ರಾಜಶ್ರೀ ಸಿಮೆಂಟ್, ಶೆಲ್ ಸಂಸ್ಥೆ, ಹಿಂದೂಸ್ಥಾನ ಪೆಟ್ರೋಲಿಯಂ, ನೆಸ್ಲೆ ಇಂಡಿಯಾ, ಎಂಆರ್‌ಪಿಎಲ್, ಒಎನ್‌ಜಿಸಿ ಪೆಟ್ರೋ ಕೆಮಿಕಲ್, ರಿಲಯನ್ಸ್ ಗ್ಯಾಸ್ ಪೈಪ್ ಲೈನ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳೊಂದಿಗೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

ಇದೊಂದು ಐತಿಹಾಸಿಕ ಸಮಾವೇಶ-ಸಿಎಂ: ರಾಜ್ಯದಲ್ಲಿ ಎರಡು ದಿನಗಳ ಕಾಲ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಐತಿಹಾಸಿಕವಾಗಿದ್ದು, ದೇಶದ ಯಾವ ರಾಜ್ಯವೂ ಈ ತೆರನಾದ ಸಮಾವೇಶ ಹಮ್ಮಿಕೊಂಡಿಲ್ಲ ಎಂದರು. ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ