ಬಂಡವಾಳ ಯಂತ್ರಗಳು ಹಾಗೂ ಗೃಹೋಪಕರಣ ವಸ್ತುಗಳ ಉತ್ಪಾದನಾ ಕ್ಷೇತ್ರದಲ್ಲಿ ಚೇತರಿಕೆ ಕಂಡಿದ್ದರಿಂದ,ಸತತ ಏಳನೇ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಎರಡಂಕಿ ಏರಿಕೆ ಕಂಡು ಶೇ.17.6ಕ್ಕೆ ತಲುಪಿದೆ.
ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಗೆ ಹೋಲಿಸಿದಲ್ಲಿ, ಕೈಗಾರಿಕೆ ವೃದ್ಧಿ ದರ ಶೇ.1.1ರಷ್ಟು ಚೇತರಿಕೆ ಕಂಡಿದೆ.
ಕೈಗಾರಿಕೆ ಉತ್ಪನ್ನ ಸೂಚ್ಯಂಕದಲ್ಲಿ ಶೇ.80ರಷ್ಟು ಪಾಲನ್ನು ಹೊಂದಿರುವ ಉತ್ಪಾದನಾ ಕ್ಷೇತ್ರ ಶೇ.19.4ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.0.4ಕ್ಕೆ ತಲುಪಿತ್ತು.
ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಯಂತ್ರಗಳ ಉತ್ಪಾದನೆ ಶೇ.72.8ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಅವಧಿಯಲ್ಲಿ ಶೇ.5.9ರಷ್ಟಾಗಿತ್ತು. ಗೃಹೋಪಕರಣ ವಸ್ತುಗಳ ಉತ್ಪಾದನೆ ಶೇ.37ರಷ್ಟು ಚೇತರಿಕೆ ಕಂಡಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ ಶೇ.17.6ರಷ್ಟಾಗಿತ್ತು ಎಂದು ಮೂಲಗಳು ತಿಳಿಸಿವೆ.
ಕೈಗಾರಿಕೆಯ ಇತರ ಕ್ಷೇತ್ರಗಳಾದ ಗಣಿಗಾರಿಕೆ ಮತ್ತು ವಿದ್ಯುತ್ ಉತ್ಪಾದನೆ ಕ್ಷೇತ್ರದಲ್ಲಿ ಶೇ.11.4ರಷ್ಟು ಚೇತರಿಕೆಯಾಗಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳ ಅವಧಿಯಲ್ಲಿ ಶೇ.6ರಷ್ಟಾಗಿತ್ತು. ದೇಶದ ಪ್ರಮುಖ 17 ಕಂಪೆನಿಗಳಲ್ಲಿ 15 ಕಂಪೆನಿಗಳು ಸಕಾರಾತ್ಮಕ ಅಭಿವೃದ್ಧಿಯನ್ನು ಕಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.