ದೇಶದ ಬೃಹತ್ ಖಾಸಗಿ ಸಂಸ್ಥೆಯಾದ ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್,ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸ್ ಸಂಸ್ಥೆಯ ಶೇ.95ರಷ್ಟು ಶೇರುಗಳನ್ನು 4,800 ಕೋಟಿ ರೂಪಾಯಿಗಳನ್ನು ನೀಡಿ ಖರೀದಿಸಲು ಸಮ್ಮತಿ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಮುಕೇಶ್ ಅಂಬಾನಿ ಮತ್ತು ಸಹೋದರ ಅನಿಲ್ ಅಂಬಾನಿ ಅವರ ನಡುವಣ ಮೇ 23 ರಂದು ನಡೆದ ಸ್ಪರ್ಧಾರಹಿತ ಒಪ್ಪಂದದ ನಂತರ ಮುಕೇಶ್ ಅಂಬಾನಿ ಟೆಲಿಕಾಂ ಸಂಸ್ಥೆಯನ್ನು ಖರೀದಿಸಲು ನಿರ್ಧರಿಸಿದ್ದಾರೆ.
ಎಚ್‌ಎಫ್‌ಸಿಎಲ್ ಆಧೀನ ಸಂಸ್ಥೆಯಾದ ಇನ್ಫೋಟೆಲ್ ಬ್ರಾಡ್‌ಬ್ಯಾಂಡ್, ಬಿಡಬ್ಲೂಎ ತರಂಗಾಂತರಗಳ ಹರಾಜಿನ ಬಿಡ್‌ನಲ್ಲಿ ಗೆಲುವು ಪಡೆದ ಕಂಪೆನಿಯಾಗಿ ಹೊರಹೊಮ್ಮಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ, ಇನ್ಫೋಟೆಲ್ ಕಂಪೆನಿಯಲ್ಲಿ 4800 ಕೋಟಿ ರೂಪಾಯಿಗಳ ಹೂಡಿಕೆ ಮಾಡಿ ಶೇ.95ರಷ್ಟು ಶೇರುಗಳನ್ನು ಖರೀದಿಸಲಿದ್ದು,ನಂತರ ಮತ್ತಷ್ಟು ಹಣವನ್ನು ಹೂಡಿಕೆ ಮಾಡಲು ಯೋಜನೆಗಳನ್ನು ರೂಪಿಸಿದೆ.
ಶೇರುಪೇಟೆಯಲ್ಲಿ ಎಚ್‌ಎಫ್‌ಸಿಎಲ್ ಇನ್ಫೋಟೆಲ್ ಸಂಸ್ಥೆಯ ಶೇರು ದರಗಳು ಕ್ರಮವಾಗಿ 10.14 ರೂಪಾಯಿಗಳಿಂದ 11.39 ರೂಪಾಯಿಗಳವರೆಗೆ ಏರಿಕೆ ಕಂಡಿದೆ.ರಿಲಯನ್ಸ್ ಶೇರುಗಳು ಕೂಡಾ ಶೇ.3ರಷ್ಟು ಚೇತರಿಕೆ ಕಂಡಿವೆ ಎಂದು ಶೇರುಪೇಟೆ ಮೂಲಗಳು ತಿಳಿಸಿವೆ.
ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮಾತನಾಡಿ, ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆ, ಹೂಡಿಕೆಗೆ ಉತ್ತಮವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರಾಹಕರು ಬ್ರಾಡ್‌ಬ್ಯಾಂಡ್ ಮೊರೆಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.