ಕಡಿಮೆ ದರದ ಖ್ಯಾತಿಯ ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್‌ನ ಶೇ.40ರಷ್ಟು ಶೇರುಗಳನ್ನು 800 ಕೋಟಿ ಪಾವತಿಸಿ ಖರೀದಿಸಲು ಸನ್ ಟಿವಿ. ಮುಖ್ಯಸ್ಥ ಕಲಾನಿಧಿ ಮಾರನ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸ್ಪೈಸ್ ಜೆಟ್ ಸಂಚಾಲಕರಾದ ಭೂಪೆಂದ್ರಾ ಕನಸಗ್ರಾ ಮತ್ತು ಅಮೆರಿಕದ ಹೂಡಿಕೆದಾರ ಡಬ್ಲೂ.ಎಲ್.ರೊಸ್,ಸನ್ ಟಿವಿ ಮುಖ್ಯಸ್ಥ ಮಾರನ್ ಅವರೊಂದಿಗೆ ನಡೆಸಿದ ಮಾತುಕತೆಗಳು ಅಂತಿಮ ಹಂತದಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೈಸ್ ಜೆಟ್ ಸಂಸ್ಥೆ ದೇಶಿಯವಾಗಿ ಐದು ವರ್ಷಗಳ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ. ಇದೀಗ ಕಾಠ್ಮಂಡು, ಮಾಲೆ ಮತ್ತು ಢಾಕಾ ದೇಶಗಳಿಗೆ ಸಂಚರಿಸಲು ಅನುಮತಿ ಪಡೆದಿದೆ.ಶ್ರೀಲಂಕಾಗೆ ವಿಮಾನ ಹಾರಟ ನಡೆಸಲು ಅನುಮತಿ ನೀಡುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ.ಮುಂಬರುವ ಅಗಸ್ಟ್ ತಿಂಗಳ ಅವಧಿಯಲ್ಲಿ ಢಾಕಾಗೆ ವಿಮಾನ ಸಂಚಾರ ಆರಂಭಿಸಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರ್‌ವಾಲ್ ತಿಳಿಸಿದ್ದಾರೆ.
ಇದಕ್ಕಿಂತ ಮೊದಲು, ಮಾರಿಷಿಯಸ್‌ನ ಗೋಲ್ಡ್‌ಮ್ಯಾನ್ ಸಾಚೆಸ್ ಇನ್‌ವೆಸ್ಟ್‌ಮೆಂಟ್ ಕಂಪೆನಿ, ಸ್ಪೈಸ್‌ಜೆಟ್‌ನಲ್ಲಿ ಶೇ.6ರಷ್ಟು ಶೇರುಪಾಲನ್ನು ಹೊಂದಿದೆ ಎಂದು ಸ್ಪೈಸ್ ಜೆಟ್ ಮೂಲಗಳು ತಿಳಿಸಿವೆ.