ಸ್ಪೈಸ್‌ಜೆಟ್‌ನ ಹೆಚ್ಚುವರಿ ಶೇರು ಖರೀದಿಸಲು ಮಾರನ್ ಚಿಂತನೆ
ನವದೆಹಲಿ, ಸೋಮವಾರ, 14 ಜೂನ್ 2010( 15:17 IST )
ಮಾಧ್ಯಮ ಕ್ಷೇತ್ರದ ಉದ್ಯಮಗಳಲ್ಲಿ ಮುಂಚೂಣಿಯಲ್ಲಿರುವ ಕಲಾನಿಧಿ ಮಾರನ್,ಸ್ಪೈಸ್‌ಜೆಟ್‌ನ ಶೇ.57.73ರಷ್ಟು ಶೇರುಗಳನ್ನು ಖರೀದಿಸಲು ನಿರ್ಧರಿಸಿದ್ದು, ಶೇರುದಾರರಿಗೆ ಮುಕ್ತ ಅಹ್ವಾನ ನೀಡಿದ್ದಾರೆ ಎಂದು ಎನಾಮ್ ಸೆಕ್ಯೂರಿಟೀಸ್ ಹೇಳಿಕೆ ನೀಡಿದೆ.
ಸನ್ ಟಿವಿ ನೆಟ್‌ವರ್ಕ್ ಸಂಸ್ಥಾಪಕರಾದ ಮಾರನ್, ರಾಷ್ಟ್ರದ ಎರಡನೇ ಬೃಹತ್ ಖಾಸಗಿ ವಿಮಾನಯಾನ ಸಂಸ್ಥೆಯಾದ ಸ್ಪೈಸ್‌ಜೆಟ್‌ನ ಶೇ.37.73ರಷ್ಟು ಶೇರುಗಳನ್ನು ಖರೀದಿಸಲು ಒಪ್ಪಂದವಾದ ನಂತರ, ಮತ್ತೆ ಶೇ.20ರಷ್ಟು ಶೇರುಗಳ ಖರೀದಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರನ್, ಸ್ಪೈಸ್‌ಜೆಟ್‌ನ ರಾಯಲ್ ಹೋಲ್ಡಿಂಗ್ ಸಂಸ್ಥೆಯ ಮೂಲಕ 156.5 ಮಿಲಿಯನ್ ಶೇರುಗಳಲ್ಲಿ ಶೇ.37.73ರಷ್ಟು ಶೇರುಗಳನ್ನು 7.39 ಬಿಲಿಯನ್ ರೂಪಾಯಿಗಳಿಗೆ ಖರೀದಿಸಲು ಒಪ್ಪಂದವಾಗಿದೆ.
ಕಲಾನಿಧಿ ಮಾರನ್, ದಕ್ಷಿಣ ಭಾರತದಲ್ಲಿ ಸನ್ ಟಿವಿ ಸೇರಿದಂತೆ 20 ಟೆಲಿವಿಜನ್ ಚಾನೆಲ್‌ಗಳು ಹಾಗೂ 42 ರೇಡಿಯೋ ಸ್ಟೇಶನ್‌ಗಳ ಮಾಲೀಕತ್ವವನ್ನು ಹೊಂದಿದ್ದಾರೆ.
ಸ್ಪೈಸ್ ಜೆಟ್‌ನ ಪ್ರತಿ ಶೇರುದರ 57.76 ರೂಪಾಯಿಗಳಂತೆ, 83 ಮಿಲಿಯನ್ ಶೇರುಗಳನ್ನು ಖರೀದಿಸಲು ಮಾರನ್ ಸಂಸ್ಥೆ ನಿರ್ಧರಿಸಿದೆ ಎಂದು ಎನಾಮ್ ಸೆಕ್ಯೂರಿಟೀಸ್ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಬಹಿರಂಗಪಡಿಸಿದೆ.