ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಸಿಎಲ್ ಟೆಕ್ನಾಲಾಜೀಸ್, ಸಿಂಗಾಪೂರ್ ಎಕ್ಸ್‌ಚೇಂಜ್ ಕಂಪೆನಿಯಿಂದ ಐದು ವರ್ಷಗಳ ಅವಧಿಯ 506 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಎಚ್‌ಸಿಎಲ್ ಸಂಸ್ಥೆ ಎಸ್‌ಜಿಎಕ್ಸ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಮೂಲಸೌಕರ್ಯ, ವ್ಯವಸ್ಥಾಪನಾ ಸೇವೆಗಳನ್ನು ನೀಡಲಿದೆ ಎಂದು ಉಭಯ ಕಂಪೆನಿಗಳು ಜಂಟಿಯಾಗಿ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿವೆ.
ಒಪ್ಪಂದದ ಪ್ರಕಾರ, ಎಚ್‌ಸಿಎಲ್‌ನ ಪ್ರಾದೇಶಿಕ ಹಾಗೂ ವಿತರಣಾ ಕೇಂದ್ರ ಕಚೇರಿಗಳಲ್ಲಿರುವ 700ಕ್ಕೂ ಹೆಚ್ಚಿನ ಸಿಬ್ಬಂದಿಯ ತಂಡ ಉತ್ತಮ ಸೇವೆ ನೀಡಲಿದೆ. ಸಿಂಗಾಪೂರ್‌ನಲ್ಲಿ ಮತ್ತಷ್ಟು ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಗಳನ್ನು ಹೊಂದಲಾಗಿದೆ ಎಂದು ಎಚ್‌ಸಿಎಲ್ ಟೆಕ್ನಾಲಾಜೀಸ್‌ನ ಕಾರ್ಯಕಾರಿ ಉಪಾಧ್ಯಕ್ಷ ವಿರೇಂದರ್ ಅಗರ್‌ವಾಲ್ ತಿಳಿಸಿದ್ದಾರೆ.
ಎಚ್‌ಸಿಎಲ್ ಸಂಸ್ಥೆ ಎಸ್‌ಜಿಎಕ್ಸ್ ಕಂಪೆನಿಯ ಮಹತ್ವದ ಪಾಲುದಾರ ಕಂಪೆನಿಯಾಗಿದ್ದು,ಏಷ್ಯಾದಲ್ಲಿನ ಗ್ರಾಹಕರಿಗೆ ವೇಗದಲ್ಲಿ ಸೌಲಭ್ಯವನ್ನು ಒದಗಿಸಲಿದೆ ಎಂದು ಎಸ್‌ಜಿಎಕ್ಸ್‌ನ ಕಾರ್ಯಕಾರಿ ಉಪಾಧ್ಯಕ್ಷ ಬಾಬ್ ಕೈಸ್ಲೆ ಹೇಳಿದ್ದಾರೆ.
ಮುಂಬೈ ಶೇರುಪೇಟೆಯ ಇಂದಿನ ವಹಿವಾಟಿನಲ್ಲಿ, ಎಚ್‌ಸಿಎಲ್ ಶೇರುಗಳು ಶೇ.2.63ರಷ್ಟು ಏರಿಕೆ ಕಂಡು 378.40 ರೂಪಾಯಿಗಳಿಗೆ ತಲುಪಿದೆ.