ಹಣದುಬ್ಬರ ದರ ಮೇ ತಿಂಗಳಾಂತ್ಯಕ್ಕೆ ಶೇ.10.16ರಷ್ಟು ಏರಿಕೆ ಕಂಡಿದ್ದು, ಮುಂಗಾರು ಮಳೆ ಉತ್ತಮವಾದಲ್ಲಿ, ಅಗತ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಜುಲೈ ತಿಂಗಳ ನಂತರ ಮುಂಗಾರು ಮಳೆಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಅರಿವಿಗೆ ಬರಲಿದ್ದು, ಒಂದು ವೇಳೆ ಮುಂಗಾರು ಮಳೆ ಉತ್ತಮವಾದಲ್ಲಿ ಹಣದುಬ್ಬರ ದರ ಇಳಿಕೆಯಾಗಲಿದೆ ಎಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಗಟು ಸೂಚ್ಯಂಕ ಹಣದುಬ್ಬರ ದರ 19 ತಿಂಗಳ ಗರಿಷ್ಛ ಮೇ ತಿಂಗಳಾಂತ್ಯಕ್ಕೆ ಶೇ.10.16ಕ್ಕೆ ಏರಿಕೆ ಕಂಡಿದೆ. ಅಂತಿಮ ವರದಿಗಳು ಲಭ್ಯವಾದ ನಂತರ ಹಣದುಬ್ಬರ ದರ ಶೇ.11.04ಕ್ಕೆ ಏರಿಕೆಯಾಗುವ ಸಾಧ್ಯತೆಗಳಿವೆ.
ದೇಶದ ಹವಾಮಾನ ಇಲಾಖೆ, ಮುಂಗಾರು ಮಳೆ ಸಾಮಾನ್ಯವಾಗಿರಲಿದೆ. ಶೇ.80 ರಷ್ಟು ಮುಂಗಾರು ಮಳೆಯಾಗಲಿದೆ ಎಂದು ಭವಿಷ್ಯ ನುಡಿದಿದೆ.ಕಳೆದ ವರ್ಷ ಮುಂಗಾರು ಮಳೆ ವಿಫಲವಾದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ದರಗಳಲ್ಲಿ ಭಾರಿ ಏರಿಕೆ ಕಂಡಿತ್ತು.
ಹಣದುಬ್ಬರ ದರ ನಿರಂತರ ಏರಿಕೆ ಕಾಣುತ್ತಿರುವುದು ಕಳವಳದ ಸಂಗತಿಯಾಗಿದೆ.ಸಗಟು ಸೂಚ್ಯಂಕ ದರ ಕೂಡಾ ಎರಡಂಕಿಯನ್ನು ದಾಟಿದೆ. ಮುಂಬರುವ ಜುಲೈವರೆಗೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ಸರಬರಾಜಿಗೆ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ ದ್ವಿದಳ ಧಾನ್ಯ ಹಾಗೂ ಸಕ್ಕರೆ ಪೂರೈಕೆ ಬಗ್ಗೆ ತೀವ್ರ ಗಮನಹರಿಸಿದೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.