ದೇಶದ ಸಾಫ್ಟ್‌ವೇರ್ ರಫ್ತು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್,ಚೀನಾ ಮತ್ತು ಮೆಕ್ಸಿಕೊ ದೇಶಗಳಲ್ಲಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುತ್ತಿರುವುದರಿಂದ,ಪ್ರಸಕ್ತ ವರ್ಷದ ಅವಧಿಯಲ್ಲಿ ವಿದೇಶಿಯರು ಸೇರಿದಂತೆ 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ.
ಬೆಂಗಳೂರು ಮೂಲದ ನಾಸ್‌ಡಾಕ್ ನೋಂದಾಯಿತ ಕಂಪೆನಿಯಾದ ಇನ್ಫೋಸಿಸ್, ಡಲ್ಲಾಸ್ ಮತ್ತು ಅಮೆರಿಕದಲ್ಲಿ ಶಾಖಾ ಕಚೇರಿಗಳನ್ನು ಆರಂಭಿಸಲಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಚೀನಾ ಮತ್ತು ಮೆಕ್ಸಿಕೊ ದೇಶಗಳತ್ತ ಗಮನಹರಿಸಲಾಗುತ್ತಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಗೋಪಾಲಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಾಗರೋತ್ತರ ವಹಿವಾಟಿಗಾಗಿ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತಿದೆ.ಪ್ರಸಕ್ತ ವರ್ಷದ ಅವಧಿಯಲ್ಲಿ ದೇಶದ ಒಳಗೆ ಮತ್ತು ವಿದೇಶಿಗಳಲ್ಲಿ ಒಟ್ಟು 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಮುಂಬರುವ ನಾಲ್ಕು ತ್ರೈಮಾಸಿಕಗಳ ಅವಧಿಗೆ, ಅಮೆರಿಕದಲ್ಲಿ 1 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೂತನ ತಂತ್ರಜ್ಞಾನಗಳಿಗೆ ಅಮೆರಿಕ ಸರಕಾರ ಮುಕ್ತ ಬೆಂಬಲ ನೀಡುತ್ತಿರುವುದರಿಂದ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.