ಸೌದಿ ಅರೇಬಿಯಾದ ಕಿಂಗ್ ಸೌದ್ ವಿಶ್ವವಿದ್ಯಾಲಯದ ಇಂಜಿನಿಯರ್‌ಗಳು, ಮೊದಲ ಬಾರಿಗೆ ಗಲ್ಫ್ ವಾತಾವರಣಕ್ಕೆ ಹೊಂದಿಕೊಳ್ಳುವಂತಹ 'ಗಜಲ್' ಕಾರನ್ನು ವಿನ್ಯಾಸ ಮಾಡಲಾಗಿದ್ದು, ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಲ್ಫ್ ರಾಷ್ಟ್ರಗಳ ಹವಾಮಾನಕ್ಕೆ ಹೊಂದಿಕೊಳ್ಳುವ ನೂತನ ಮಾಡೆಲ್ ಕಾರಿಗೆ 'ಗಜಲ್' ಎಂದು ಹೆಸರಿಸಲಾಗಿದ್ದು,ಸೌದಿ ದೊರೆ ಅಬ್ದುಲ್ಲಾ ರಿಯಾದ್‌ನಲ್ಲಿ ಬಿಡುಗಡೆಗೊಳಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಿಂಗ್ ಸೌದ್ ವಿಶ್ವವಿದ್ಯಾಲಯದ ಇಂಜಿನಿಯರ್‌ಗಳು ಕಾರನ್ನು ತಯಾರಿಸಿದ್ದು,ಉನ್ನತ ಶಿಕ್ಷಣ ಸಚಿವಾಲಯ ಆರ್ಥಿಕ ಸಹಾಯವನ್ನು ನೀಡಿದೆ. ಸೌದಿ ಅರೇಬಿಯಾ ಹಾಗೂ ಗಲ್ಫ್ ರಾಷ್ಟ್ರಗಳ ವಾತಾವರಣಕ್ಕೆ ಸೂಕ್ತವಾಗಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.
ಉನ್ನತ ಶಿಕ್ಷಣ ಸಚಿವ ಖಾಲೇದ್ ಅಲ್-ಅನ್ಖಾರಿ ಮಾತನಾಡಿ, ಕಿಂಗ್ ಸೌದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಕಾರು ತಯಾರಿಕೆ ಪ್ರೋಜೆಕ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಸೌದಿ ವಿದ್ಯಾರ್ಥಿಗಳಿಗೆ ಅವಕಾಶ ಹಾಗೂ ಸೌಲಭ್ಯಗಳನ್ನು ಒದಗಿಸಿದಲ್ಲಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಂಶೋಧಿಸಿ ಕಾರ್ಯರೂಪಕ್ಕೆ ತರುವ ಸಾಮರ್ಥ್ಯವಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಸಚಿವ್ ಖಾಲೇದ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಾರು 4.8 ಮೀಟರ್ ಉದ್ದವಿದ್ದು, 1.9 ಮೀಟರ್ ಅಗಲವಿದೆ.ವಾರ್ಷಿಕವಾಗಿ 20,000 ಕಾರುಗಳನ್ನು ತಯಾರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸೌದಿ ಮೂಲಗಳು ತಿಳಿಸಿವೆ.