ಪಂಥನಗರ್( ಉತ್ತರಖಂಡ್): , ಶನಿವಾರ, 19 ಜೂನ್ 2010( 15:31 IST )
ಅಹಾರ ಭಧ್ರತೆಯ ದೃಷ್ಟಿಯಿಂದ ದೇಶದ ಕೃಷಿ ಕ್ಷೇತ್ರದ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಅಗತ್ಯವಿದೆ ಎಂದು ಪ್ರದಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಜಿಬಿ ಪಂಥ್ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಹಾರ ಭಧ್ರತೆಯ ದೃಷ್ಟಿಯಿಂದ ಉತ್ಪಾದನೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ದೇಶದ ಪ್ರಸಕ್ತ ಅವಧಿಯಲ್ಲಿ ಕೃಷಿ ಉತ್ಪಾದನೆ ಶೇ. 2ರಷ್ಟಿದ್ದು, ಶೇ.4ಕ್ಕೆ ಏರಿಕೆಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಎದುರಾಗಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಕ್ಕೆ ಹೋಲಿಸಿದಲ್ಲಿ 2009-10ರ ಅವಧಿಯಲ್ಲಿ ಕೃಷಿ ಕ್ಷೇತ್ರದ ಉತ್ಪಾದನೆ ಬರಗಾಲದಿಂದಾಗಿ ಕೇವಲ ಶೇ.0.2ರಷ್ಟು ಮಾತ್ರ ಉತ್ಪಾದನೆಯಾಗಿತ್ತು. ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ.