ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ಉಗಾಂಡಾ ದೇಶದಲ್ಲಿ ಮುಂಬರುವ ಎರಡು ವರ್ಷದೊಳಗಾಗಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಉಗಾಂಡಾದ ಲಿಜನ್ ಪತ್ರಕೆ ವರದಿ ಮಾಡಿದೆ.
ಭಾರ್ತಿ ಏರ್‌ಟೆಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕೊಹ್ಲಿ, ಸಂಪರ್ಕ ವಿಸ್ತರಣೆ, ವಿತರಕ ವ್ಯವಸ್ಥೆ, ಮೂಲಸೌಕರ್ಯ ಮತ್ತು ಬ್ರಾಡ್‌ಬ್ಯಾಂಡ್ ವಿಸ್ತರಣೆಗಾಗಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಕಂಪೆನಿ ನಿರ್ಧರಿಸಿದೆ ಎಂದು ಹೇಳಿರುವುದಾಗಿ ಸರಕಾರಿ ಸ್ವಾಮ್ಯದ ಪತ್ರಿಕೆ ವಿಜನ್ ವರದಿ ಮಾಡಿದೆ.
ಭಾರ್ತಿ ಏರ್‌ಟೆಲ್ ಸಂಸ್ಥೆ, ಕಳೆದ ತಿಂಗಳು ಕುವೈತ್ ಮೂಲದ ಝೈನ್ ಟೆಲಿಕಾಂ ಕಂಪೆನಿಯನ್ನು 9 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿ ಖರೀದಿಸಿತ್ತು. ಝೈನ್ ಟೆಲಿಕಾಂ ಆಫ್ರಿಕಾದ 15 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ನಾವು ಟೆಲಿಕಾಂ ಮಾರುಕಟ್ಟೆಯಲ್ಲಿ ಇತರರನ್ನು ಹಿಂಬಾಲಿಸುತ್ತಿದ್ದೇವೆ.ನಾವೇ ಅಗ್ರಸ್ಥಾನದಲ್ಲಿರುವ ದಿನಗಳು ದೂರವಿಲ್ಲ ಎನ್ನುವ ಕೊಹ್ಲಿ ಹೇಳಿಕೆಯನ್ನು ಪತ್ರಿಕೆ ಪ್ರಕಟಿಸಿದೆ.