ಭಾರತ- ಅಮೆರಿಕ ಸಿಇಒ ವಹಿವಾಟು ವೇದಿಕೆ ಸಭೆ,ಮಂಗಳವಾರದಂದು ಆರಂಭವಾಗಲಿದ್ದು, ಡೊ ಕೆಮಿಕಲ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮುಖ್ಯಸ್ಥ ಆಂಡ್ರೂವ್ ಲಿವೆರಿಸ್ ಪಾಲ್ಗೊಳ್ಳುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಪೂರ್ವನಿಗದಿತ ಕಾರ್ಯಕ್ರಮಗಳಿಂದಾಗಿ, ಆಂಡ್ರೂವ್ ಲಿವೆರಿಸ್ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಡೊ ಕೆಮಿಕಲ್ಸ್ ವಕ್ತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಭಾರತದ ನಿಯೋಗದಲ್ಲಿ ವಾಣಿಜ್ಯ ಸಚಿವ ಆನಂದ್ ಶರ್ಮಾ, ಕೇಂದ್ರ ಯೋಜನಾ ಆಯೋಗದ ಮುಖ್ಯಸ್ಥ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಸೇರಿದಂತೆ ದೇಶದ ಪ್ರಮುಖ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಯೋಗದಲ್ಲಿದ್ದು, ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
1984ರಲ್ಲಿ ನಡೆದ ಭೂಪಾಲ್ ಅನಿಲ ದುರಂತಕ್ಕೆ ಕಾರಣವಾದ ಯುನಿಯನ್ ಕಾರ್ಬೈಡ್ ಕಂಪೆನಿಯ ಮಾಲೀಕತ್ವವನ್ನು ಹೊಂದಿರುವ ಡೊ ಕೆಮಿಕಲ್ಸ್ ವಿವಾದ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ, ಆಂಡ್ರೂವ್ ಲಿವೆರಿಸ್ ಗೈರುಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ
ಮಧ್ಯಪ್ರದೇಶದ ಭೂಪಾಲ್‌ನಲ್ಲಿ 1984 ಡಿಸೆಂಬರ್ 3 ರಂದು ಯುನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಂಪೆನಿಯ ಘಟಕದಲ್ಲಿ ಮಿಥೈಲ್ ಐಸೊಸೈನೈಟ್ ಅನಿಲ ಸೋರಿಕೆಯಾಗಿ, 15,000 ಜನರು ಸಾವನ್ನಪ್ಪಿದ್ದು ಐದು ಲಕ್ಷಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು.
ಆಂಡ್ರಿವ್ ಲಿವೆರಿಸ್ ಅವರ ಗೈರುಹಾಜರಿಗೆ ಭೂಪಾಲ್ ದುರಂತದ ವಿವಾದ ಕಾರಣವಲ್ಲ ಎಂದು ಡೊ ಕೆಮಿಕಲ್ಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.