ನೈಸರ್ಗಿಕ ಪ್ರಕೋಪಗಳನ್ನು ಸಮರ್ಥವಾಗಿ ಎದುರಿಸಲು ಭಾರತಕ್ಕೆ ವಿಶ್ವಬ್ಯಾಂಕ್ 255 ಮಿಲಿಯನ್ ಡಾಲರ್ ಸಹಾಯ ಧನವನ್ನು ಮಂಜೂರು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಷನಲ್ ಸೈಕ್ಲೊನ್ ರಿಸ್ಕ್ ಮಿಟಿಗೇಶನ್ ಪ್ರೋಗ್ರಾಂ ಅಡಿಯಲ್ಲಿ ಮೊದಲ ಹಂತದ ಅಂಗವಾಗಿ, ಇಂಟರ್‌ನ್ಯಾಷನಲ್ ಡೆವಲೆಪ್‌ಮೆಂಟ್ ಅಸೋಸಿಯೇಶನ್ ಮೂಲಕ ಸಾಲದ ನೆರವನ್ನು ನೀಡಿದ್ದು, ಮರುಪಾವತಿಗಾಗಿ 35 ವರ್ಷಗಳ ಅವಧಿಯನ್ನು ನಿಗದಿಪಡಿಸಿದ್ದು, 10 ವರ್ಷಗಳ ಕಾಲ ವಿಸ್ತರಿಸಬಹುದಾಗಿದೆ ಎಂದು ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಯೋಜನೆಯನ್ನು ಕನಿಷ್ಠ ಮೂರು ಹಂತಗಳಲ್ಲಿ ವಿಂಗಡಿಸುವ ಸಾಧ್ಯತೆಗಳಿದ್ದು,ಮೊದಲ ಹಂತದಲ್ಲಿ ಒರಿಸ್ಸಾ ಮತ್ತು ಆಂಧ್ರಪ್ರದೇಶ ಎರಡನೇ ಹಂತದಲ್ಲಿ ಕರಾವಳಿ ತೀರದ ರಾಜ್ಯಗಳು ಮತ್ತು ಮೂರನೇ ಹಂತದಲ್ಲಿ ಇತರ ರಾಜ್ಯಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಪ್ರತಿಯೊಂದು ಹಂತವನ್ನು ಪ್ರತ್ಯೇಕವಾಗಿ ಅನುಮತಿ ನೀಡಲಾಗುತ್ತಿದ್ದು, ಅಭಿವೃದ್ಧಿ ಕುರಿತಂತೆ ಸಂಪೂರ್ಣ ಗಮನಹರಿಸಲಾಗುತ್ತದೆ.ನೈಸರ್ಗಿಕ ಪ್ರಕೋಪಗಳನ್ನು ತಡೆಯುವಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಿಶ್ವಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.