ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್ 3, ಡೀಸೆಲ್ 2, ಸೀಮೆಣ್ಣೆ 3, ಎಲ್ಪಿಜಿ 35 ರೂ. ಏರಿಕೆ! (EGoM), Petrol , Diesel | Cooking gas | Kerosene | Increase prices)
ಈಗಾಗಲೇ ಆಹಾರದ ಹಣದುಬ್ಬರದಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ 'ಆಮ್ ಆದ್ಮಿ' ಪರ ತಾವೆಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರಕಾರ ಮತ್ತೊಂದು ಶಾಕ್ ನೀಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಅನುಕ್ರಮವಾಗಿ 3 ರೂ., 2 ರೂ. ಹಾಗೂ ಅಡುಗೆ ಅನಿಲ ಸಿಲಿಂಡರ್‌ಗೆ 35 ರೂ. ಏರಿಕೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಅಧಿಕಾರಯುತ ಸಚಿವರ ಗುಂಪು ಶುಕ್ರವಾರ ಸಭೆ ಸೇರಿ, ಇಂಧನ ದರ ನಿಗದಿಯನ್ನು ಸರಕಾರದ ನಿಯಂತ್ರಣದಿಂದಲೂ ಮುಕ್ತಗೊಳಿಸಿ ನಿರ್ಣಯ ಕೈಗೊಂಡಿದೆ.
ಸಮಿತಿ ಸಭೆಯ ನಂತರ ಮಾತನಾಡಿದ ಪೆಟ್ರೋಲಿಯಂ ಕಾರ್ಯದರ್ಶಿ ಎಸ್.ಸುಂದರೇಶನ್ ಮಾತನಾಡಿ, ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 3.73 ರೂಪಾಯಿ, ಡೀಸೆಲ್ 2 ರೂಪಾಯಿ, ಅನಿಲ ಸಿಲಿಂಡರ್ 35 ರೂಪಾಯಿಗಳ ಏರಿಕೆ ಘೋಷಿಸಿದರು. ಅದೇ ರೀತಿ, ಸೀಮೆಎಣ್ಣೆ ದರದಲ್ಲಿ 3 ರೂಪಾಯಿ ಹೆಚ್ಚಳ ಮಾಡಲಾಗಿದ್ದು. ದರ ಏರಿಕೆ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಸರಕಾರದ ನಿಯಂತ್ರಣದಿಂದ ಇಂಧನ ದರ ಏರಿಕೆಯಿಂದ ಮುಕ್ತಗೊಳಿಸಿ, ಅನುದಾನವನ್ನು ಕಡಿತಗೊಳಿಸಿದ್ದರಿಂದ ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ದರ ಹೆಚ್ಚಳವಾಗುವುದರಿಂದ ಆರ್ಥಿಕ ಚೇತರಿಕೆಯಲ್ಲಿ ನೆರವಾಗುತ್ತದೆ ಎಂದು ತೈಲ ಕಂಪೆನಿಗಳ ಮೂಲಗಳು ತಿಳಿಸಿವೆ.
ಸರಕಾರದ ದರ ಏರಿಕೆ ನಿರ್ಧಾರದಿಂದಾಗಿ ಇಲ್ಲಿಯವರೆಗೆ ನಷ್ಟ ಅನುಭವಿಸುತ್ತಿದ್ದ ಕಂಪೆನಿಗಳು, ಇದೀಗ ಲಾಭದಾಯಕವಾಗುವ ನಿಟ್ಟಿನಲ್ಲಿ ಮಾರುಕಟ್ಟೆ ದರವನ್ನು ನಿಗದಿಪಡಿಸಲಾಗುತ್ತದೆ ಎಂದು ತೈಲ ಕಂಪೆನಿಗಳ ವಕ್ತಾರರು ತಿಳಿಸಿದ್ದಾರೆ.
ಆದರೆ ಈಗಾಗಲೇ ಆಹಾರವಸ್ತುಗಳು, ಧಾನ್ಯಗಳು, ತರಕಾರಿ ಮುಂತಾದ ಬದುಕಲು ಬೇಕಿರುವ ಸಾಮಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನ ಸಾಮಾನ್ಯ, ಇದೀಗ ಇಂಧನ ಬೆಲೆ ಏರಿಕೆ, ಆ ಮೂಲಕವಾಗಿ ಮುಂದಾಗಬಹುದಾದ ಪ್ರಯಾಣ ದರ, ಸಾಗಾಟ ದರ ಇತ್ಯಾದಿ ಬೆಲೆ ಏರಿಕೆಗಳಿಂದ ಎದುರಾಗುವ ದಯನೀಯ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸುತ್ತಿದ್ದಾನೆ.