ದೇಶದ ಕಾರ್ಪೋರೇಟ್ ವಲಯದಲ್ಲಿಯೇ ಅತಿ ದೊಡ್ಡ ಹಗರಣ ಎಂದು ಬಿಂಬಿತವಾಗಿದ್ದ ಸತ್ಯಂ ಕಂಪ್ಯೂಟರ್ ಕಂಪೆನಿಯ ರಾಮಲಿಂಗಾ ರಾಜು ಹೊರತುಪಡಿಸಿದ ಪ್ರಮುಖ ಆರೋಪಿಗಳಿಗೆ, ಹೈದ್ರಾಬಾದ್‌ನ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಕಳೆದ ವರ್ಷ ಸತ್ಯಂ ವಂಚನೆಯ ಆರೋಪದ ಮೇಲೆ ಬಂಧಿತರಾಗಿದ್ದ ಪ್ರಕರಣದ ರೂವಾರಿಗಳಾದ ಬಿ.ರಾಮಾಲಿಂಗಂ ರಾಜು ಸಹೋದರ ರಾಮಾರಾಜು ಸೇರಿದಂತೆ ಇತರ ಮೂವರು ಆರೋಪಿಗಳಿಗೆ ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಜಾಮೀನು ನೀಡಿದೆ.
ಸತ್ಯಂ ಕಂಪ್ಯೂಟರ್ ಸರ್ವಿಸಸ್ ಕಂಪೆನಿಯ ಸಂಸ್ಥಾಪಕರಲ್ಲೊಬ್ಬರಾಗಿದ್ದ ರಾಮಾ ರಾಜು, ಹಣಕಾಸಿನ ವಂಚನೆಯ ಆರೋಪದ ಮೇಲೆ ಬಂಧಿತರಾಗಿದ್ದರು.ಕಂಪೆನಿಯ ಇತರ ಮೂವರು ಉದ್ಯೋಗಿಗಳಿಗೆ ಕೂಡಾ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇದಕ್ಕಿಂತ ಮೊದಲು, ಸರಕಾರಿ ಪರ ವಕೀಲರಾದ ಗೋಪಾಲ ಸುಬ್ರಮಣ್ಯಂ, ಸತ್ಯಂ ಆರೋಪಗಳಿಗೆ ಜಾಮೀನು ನೀಡಿದಲ್ಲಿ ಸಾಕ್ಷಾಧಾರಗಳನ್ನು ತಿರುಚುವ ಹಾಗೂ ಸಾಕ್ಷಿಗಳ ಮೇಲೆ ಪ್ರಬಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಜಾಮೀನು ನೀಡದಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.
ಉಚ್ಚನ್ಯಾಯಾಲಯ, ಕಳೆದ ತಿಂಗಳು ರಾಮಲಿಂಗಂ ರಾಜು ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಕಳೆದ ವರ್ಷದ ಜನೆವರಿ ತಿಂಗಳ ಅವಧಿಯಲ್ಲಿ ರಾಮಲಿಂಗಂ ರಾಜು ಕಂಪೆನಿಯ ಬ್ಯಾಂಕ್ ದಾಖಲೆಗಳನ್ನು ತಿರುಚಿ ವಂಚಿಸಿರುವುದಾಗಿ ಒಪ್ಪಿಕೊಂಡ ನಂತರ ಅವರ ಸಹೋದರ ರಾಮಾ ರಾಜು ಅವರನ್ನು ಬಂಧಿಸಲಾಗಿತ್ತು.
2009ರಲ್ಲಿ ದೇಶದ ಕಾರ್ಪೋರೇಟ್ ವಲಯದಲ್ಲಿ ಆಘಾತ ಮೂಡಿಸಿದ ಬಹುಕೋಟಿ ಹಗರಣದಲ್ಲಿ, ಸುಮಾರು 14,000 ಕೋಟಿ ರೂಪಾಯಿ ಅವ್ಯವಹಾರವಾಗಿದ್ದು, ರಾಜು ಕುಟುಂಬ 2,700 ಕೋಟಿ ರೂಪಾಯಿಗಳನ್ನು ಶೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕಳೆದ ತಿಂಗಳು ಸಿಬಿಐ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿತ್ತು.
ಸತ್ಯಂ ವಂಚನೆಯಲ್ಲಿ ಕಂಪೆನಿಯ ಅಡಳಿತ ಮಂಡಳಿಯ ಸದಸ್ಯರು ಹಾಗೂ ಲೆಕ್ಕಪರಿಶೋಧಕ ಕಂಪೆನಿಯ ಉನ್ನತ ಅಧಿಕಾರಿಗಳು ಭಾಗವಹಿಸಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದು, ವಿಚಾರಣೆ ಹೈದ್ರಾಬಾದ್‌ನ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ರಾಮಲಿಂಗಾ ರಾಜು ಹೊರತುಪಡಿಸಿ, ಇತರ ಆರೋಪಿಗಳಾದ, ರಾಮಾರಾಜು, ವಿ.ಶ್ರೀನಿವಾಸ್, ಗೋಪಾಲ್‌ಕೃಷ್ಣನ್, ಟಿ.ಶ್ರೀನಿವಾಸ್, ಬಿ.ಸೂರ್ಯನಾರಾಯಣಾ ರಾಜು, ಜಿ. ರಾಮಾಕೃಷ್ಣ, ಡಿ.ವೆಂಕಟಪತಿ ರಾಜು, ಶ್ರೀಶೈಲಂ ಚೆಟ್‌ಕುರು ಮತ್ತು ವಿ.ಎಸ್.ಪಿ.ಗುಪ್ತಾ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.