ರಿಲಯನ್ಸ್ ಇಂಡಸ್ಟ್ರೀಸ್‌ನ ಖ್ಯಾತ ಉದ್ಯಮಿ ಅನಿಲ್ ಅಂಬಾನಿ,ಪ್ರಧಾನಿಯವರನ್ನು ಭೇಟಿ ಮಾಡಿ, ಕಂಪೆನಿಯ ಆರಂಭಿಸಲಿರುವ ವಿದ್ಯುತ್ ಸ್ಥಾವರಗಳಿಗೆ ನೈಸರ್ಗಿಕ ಅನಿಲ ಸರಬರಾಜು ಸೇರಿದಂತೆ ಇತರ ವಿಷಯಗಳ ಕುರಿತಂತೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭೂಸ್ವಾಧೀನ ಸೇರಿದಂತೆ ಸರಕಾರ ನಿಗದಿಪಡಿಸಿದ ಮೈಲುಗಲ್ಲನ್ನು ಕ್ರಮಿಸಿದ ಕಂಪೆನಿಗಳಿಗೆ ಮೊದಲ ಆದ್ಯತೆ ನೀಡಲು ವಿದ್ಯುತ್ ಸಚಿವಾಲಯ ಪಟ್ಟಿಯನ್ನು ಸಿದ್ಧಪಡಿಸುತ್ತಿರುವ ಹಿನ್ನೆಲೆಯಲ್ಲಿ,ಅನಿಲ್ ಅಂಬಾನಿ ಭೇಟಿ ಮಹತ್ವ ಪಡೆದಿದೆ.
ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಮತ್ತು ಪ್ರಧಾನಿ ಡಾ.ಮನಮೋಹನ್ ಸಿಂಗ್ ಭೇಟಿಯಾಗಿರುವುದನ್ನು ಪ್ರಧಾನಿ ಕಚೇರಿ ಮೂಲಗಳು ಖಚಿತಪಡಿಸಿವೆ. ಆದರೆ ಚರ್ಚೆಯ ಕುರಿತಂತೆ ವಿವರಗಳನ್ನು ನೀಡಲು ನಿರಾಕರಿಸಿವೆ.
ಅನಿಲ್ ಅಂಬಾನಿ, ಗೃಹಸಚಿವಾಲಯದ ಹಿರಿಯ ಅಧಿಕಾರಿಗಳು ಹಾಗೂ ಸಂಪುಟ ದರ್ಜೆಯ ಕೆಲ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ತಿಂಗಳು, ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅವರನ್ನು ಭೇಟಿ ಮಾಡಿ, ಉತ್ತರಪ್ರದೇಶದ ದಾದ್ರಿಯಲ್ಲಿ ಸ್ಥಾಪಿಸಲಾಗುತ್ತಿರುವ ವಿದ್ಯುತ್ ಘಟಕಗಳಿಗೆ ನೈಸರ್ಗಿಕ ಅನಿಲ ಸರಬರಾಜು ಕುರಿತಂತೆ ಮಾತುಕತೆ ನಡೆಸಿದ್ದರು.