ಸಾಮಾಜಿಕ ನೆಟ್‌ವರ್ಕ್ ತಾಣವಾದ ಫೇಸ್‌ಬುಕ್, ಇದೀಗ 500 ಮಿಲಿಯನ್ ಬಳಕೆದಾರರ ಸೇರ್ಪಡೆಯೊಂದಿಗೆ ನೂತನ ದಾಖಲೆಯನ್ನು ಸ್ಥಾಪಿಸಲು ಮುಂದಾಗಿದೆ.
ಅಂತಾರಾಷ್ಟ್ರೀಯ ಸಾಮಾಜಿಕ ತಾಣಗಳನ್ನು ಹಿಂದಿಕ್ಕಿದ ಫೇಸ್‌ಬುಕ್, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ದ್ವಿಗುಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ತಿಂಗಳು 30 ಬಿಲಿಯನ್ ಛಾಯಾ ಚಿತ್ರಗಳು, ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು ಮತ್ತು ಸುದ್ದಿ ವಿವರಗಳನ್ನು ಫೇಸ್‌ಬುಕ್ ಮೂಲಕ ಹಂಚಿಕೊಳ್ಳಲಾಗುತ್ತದೆ. ಫೇಸ್‌ಬುಕ್ ಸದಸ್ಯರು ತಿಂಗಳಿಗೆ ಕನಿಷ್ಠ 700 ಬಿಲಿಯನ್ ನಿಮಿಷಗಳನ್ನು ಚಾಟ್ ಮಾಡುವುದರಲ್ಲಿ ಕಳೆಯುತ್ತಾರೆ ಎಂದು ಫೇಸ್‌ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ
ವಿಶ್ವದಾದ್ಯಂತ ಫೇಸ್‌ಬುಕ್ ವಿಸ್ತರಿಸಲು ನೆರವು ನೀಡಿದ ಬಳಕೆದಾರರಿಗೆ ಇದೊಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಕಂಪೆನಿಯ 26 ವರ್ಷ ವಯಸ್ಸಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕೆರ್‌ಬೆರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಫೇಸ್‌ಬುಕ್‌ಗೆ ಪ್ರತಿ ತಿಂಗಳು 50 ಮಿಲಿಯನ್ ನೂತನ ಬಳಕೆದಾರರು ಸೇರ್ಪಡೆಯಾಗುತ್ತಾರೆ. ಕಂಪೆನಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲು ಪ್ರಯತ್ನಿಸುತ್ತಿದೆ ಎಂದು ಕಂಪೆನಿಯ ಸಿಬ್ಬಂದಿ ವಾಲ್‌ಡೆಸ್ ಹೇಳಿದ್ದಾರೆ.