ಆಲೂಗಡ್ಡೆ ಮತ್ತು ಈರುಳ್ಳಿ ಸೇರಿದಂತೆ ತರಕಾರಿ ದರಗಳ ಇಳಿಕೆಯಿಂದಾಗಿ, ಜುಲೈ 10ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.12.47ಕ್ಕೆ ಇಳಿಕೆಯಾಗಿದೆ. ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.12.87ಕ್ಕೆ ತಲುಪಿತ್ತು.
ವಾರ್ಷಿಕ ಆಧಾರದನ್ವಯ, ಆಲೂಗಡ್ಡೆ ದರದಲ್ಲಿ ಶೇ.45ರಷ್ಟು ಹಾಗೂ ಈರುಳ್ಳಿ ದರದಲ್ಲಿ ಶೇ.8ರಷ್ಟು ಕುಸಿತವಾಗಿದೆ. ಒಟ್ಟಾರೆ ತರಕಾರಿ ದರಗಳಲ್ಲಿ ಶೇ.9.92ರಷ್ಟು ಕುಸಿತವಾಗಿದೆ.
ಏತನ್ಮದ್ಯೆ, ದ್ವಿದಳ ಧಾನ್ಯ ದರಗಳಲ್ಲಿ ಕಳೆದ ವರ್ಷ ಶೇ.23.79ರಷ್ಟು ಏರಿಕೆಯಾಗಿತ್ತು. ಆದರೆ ಪ್ರಸಕ್ತ ಅವಧಿಯಲ್ಲಿ ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.0.84ರಷ್ಟು ಇಳಿಕೆಯಾಗಿದೆ.
ವಾರ್ಷಿಕ ಆಧಾರದನ್ವಯ, ಪ್ರಸಕ್ತ ವಾರದ ಅವಧಿಯಲ್ಲಿ ಗೋದಿ ದರಗಳಲ್ಲಿ ಶೇ.5.81 ರಷ್ಟು ಏರಿಕೆಯಾಗಿದೆ.
ಜೂನ್ ತಿಂಗಳ ಅವಧಿಯಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ.10.55ಕ್ಕೆ ತಲುಪಿತ್ತು. ಆಹಾರ ಹಣದುಬ್ಬರ ವರ್ಷದ ಬಹುತೇಕ ಅವಧಿಯಲ್ಲಿ ಶೇ.16ಕ್ಕೆ ತಲುಪಿ ಮುಂದುವರಿದಿತ್ತು.ಆದರೆ ಜೂನ್ ಮಧ್ಯ ಭಾಗದಲ್ಲಿ ಶೇ.13ಕ್ಕೆ ಇಳಿಕೆ ಕಂಡಿತ್ತು ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.