ದೇಶಧ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆ, ಜೂನ್ 30ಕ್ಕೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ, ನಿವ್ವಳ ಲಾಭದಲ್ಲಿ ಶೇ.30.5 ರಷ್ಟು ಏರಿಕೆಯಾಗಿ 1,318.6 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 1,010.4 ಕೋಟಿ ರೂಪಾಯಿಗಲಿಗೆ ತಲುಪಿತ್ತು ಎಂದು ವಿಪ್ರೋ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಕೆಲ ಸವಾಲುಗಳ ಮಧ್ಯೆಯು ವಿಶ್ವಾದಾದ್ಯಂತ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಭಾರಿ ಬೇಡಿಕೆ ಎದುರಾಗಿದ್ದು, ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ತಿಳಿಸಿದ್ದಾರೆ.
ಕಂಪೆನಿಯ ನಿವ್ವಳ ಆದಾಯದಲ್ಲಿ ಶೇ.15.85ರಷ್ಟು ಏರಿಕೆಯಾಗಿ, 7,236.4 ಕೋಟಿ ರೂಪಾಯಿಗಳಿಗೆ ತಲುಪಿದೆ. ಕಳೆದ ವರ್ಷದ ಅವಧಿಯಲ್ಲಿ 6,246.2 ಕೋಟಿ ರೂಪಾಯಿಗಳಿಗೆ ತಲುಪಿತ್ತು.
ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಕಂಪೆನಿಗೆ 4,854 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಟ್ಟು ಉದ್ಯೋಗಿಗಳ ಸಂಖ್ಯೆ 1.12 ಲಕ್ಷಕ್ಕೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 30ಕ್ಕೆ ಎರಡನೇ ತ್ರೈಮಾಸಿಕ ಅಂತ್ಯಗೊಂಡಂತೆ, ಐಟಿ ಕ್ಷೇತ್ರದ ಆದಾಯದಲ್ಲಿ ಏರಿಕೆಯಾಗುವ ಸಾಧ್ಯತೆಗಳಿದ್ದು,1,253- 1,277 ಮಿಲಿಯನ್ ಡಾಲರ್‌ಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಅದಿಕಾರಿಗಳು ತಿಳಿಸಿದ್ದಾರೆ.