ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಲ್ಯಾಪ್‌ಟಾಪ್ ಕೇವಲ 750 ರೂಪಾಯಿಗಳಿಗೆ ದೊರೆಯಲಿದೆ.
ಲ್ಯಾಪ್‌ಟಾಪ್ ಮೌಲ್ಯ 1500 ರೂಪಾಯಿಗಳಾಗಿದ್ದು, ಕೇಂದ್ರ ಸರಕಾರ ಶೇ.50ರಷ್ಟು ಅನುದಾನವನ್ನು ನೀಡುವುದರಿಂದ, ಕೇವಲ 750 ರೂಪಾಯಿಗಳಿಗೆ ವಿದ್ಯಾರ್ಥಿಗಳು ಖರೀದಿಸಬಹುದಾಗಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
ಮತ್ತಷ್ಟು ಕಂಪೆನಿಗಳು, ವಿದ್ಯಾರ್ಥಿಗಳಿಗಾಗಿ ಲ್ಯಾಪ್‌ಟಾಪ್ ಉತ್ಪಾದಿಸಲು ಬಯಸಿದಲ್ಲಿ, ಯಾಂತ್ರಿಕವಾಗಿ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PTI
ಕೆಲ ವರ್ಷಗಳ ಹಿಂದೆ, ಕಡಿಮೆ ದರದ ಲ್ಯಾಪ್‌ಟಾಪ್ ತಯಾರಿಕೆ ಕುರಿತಂತೆ ಪ್ರಸ್ತಾವನೆ ಸಲ್ಲಿಸಿತ್ತು. ಅಧಿಕಾರಿಗಳು ಆರಂಭದಲ್ಲಿ 500 ರೂಪಾಯಿಗಳಿಗೆ ದೊರೆಯಬಹುದು ಎಂದು ಹೇಳಿದ್ದರು. ಆದರೆ ಇದೀಗ ಲ್ಯಾಪ್‌ಟಾಪ್ ದರದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಲ್ಯಾಪ್‌ಟಾಪ್ ಗಾತ್ರದಲ್ಲಿ ಚಿಕ್ಕದಾಗಿದ್ದು, ಟಚ್ ಸ್ಕ್ರೀನ್ ಇನ್‌ಬಿಲ್ಟ್ ಕೀ ಬೋರ್ಡ್, 2ಜಿಬಿ ರಾಮ್ ಮೆಮೋರಿ, ವೈ-ಪೈ ಸಂಪರ್ಕ, ಯುಎಸ್‌ಬಿ ಪೋರ್ಟ್ ಮತ್ತು 2 ವ್ಯಾಟ್ ಬ್ಯಾಟರಿ ಸಿಸ್ಟಂ ಹೊಂದಿದೆ.
ದೇಶದ ಖಾಸಗಿ ಕಂಪೆನಿಗಳು ಕೂಡಾ, ಕಡಿಮೆ ದರದ ಲ್ಯಾಪ್‌ಟಾಪ್‌ಗಳನ್ನು ಉತ್ಪಾದಿಸುವಂತೆ ಮಾನವ ಸಂಪನ್ಮೂಲ ಸಚಿವಾಲಯ ಆಹ್ವಾನ ನೀಡಿದೆ.
ಕಡಿಮೆ ದರದ ಲ್ಯಾಪ್‌ಟಾಪ್ ಯೋಜನೆ ಆರಂಭಿಸಿದಾಗ, ಹಲವಾರು ಖಾಸಗಿ ಕಂಪೆನಿಗಳು ಮುಂದೆ ಬರಲು ಹಿಂದೇಟು ಹಾಕಿದ್ದವು. ಇದೀಗ ಯೋಜನೆಯಲ್ಲಿ ಪಾಲ್ಗೊಳ್ಳಲು ಕಂಪೆನಿಗಳು ಆಸಕ್ತಿಯನ್ನು ತೋರಿವೆ ಎಂದು ಸಿಬಲ್ ವಿವರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಲ್ಯಾಪ್‌ಟಾಪ್ ವಿತರಿಸುವ ಕುರಿತಂತೆ, ಐಐಎಸ್‌ಸಿ ಬೆಂಗಳೂರು, ಐಐಟಿ ಖರಗ್ಪುರ್, ಐಐಟಿ ಚೆನ್ನೈ ಮತ್ತು ಐಐಟಿ ಮುಂಬೈ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಪ್‌ಟಾಪ್‌ಗಳನ್ನು ಮಾನವ ಸಂಪನ್ಮೂಲ ಸಚಿವಾಲಯ ವಿತರಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದು, ಸಾಗಾಣಿಕೆ ವೆಚ್ಚವನ್ನು ಪರಿಶೀಲಿಸಿದ ನಂತರ, ಲ್ಯಾಪ್‌ಟಾಪ್‌ನ ಅಂತಿಮ ದರವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಲ್ಯಾಪ್‌ಟಾಪ್ ಖರೀದಿಗೆ ಕೇಂದ್ರ ಸರಕಾರ ಶೇ.50ರಷ್ಟು ಅನುದಾನವನ್ನು ನೀಡುತ್ತಿದೆ. ಒಂದು ವೇಳೆ ಸಾಗಾಣಿಕೆ ವೆಚ್ಚ ಕಡಿಮೆಯಾದಲ್ಲಿ ಅದನ್ನೂ ಸರಕಾರ ಭರಿಸಲಿದೆ ಎಂದು ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.