ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಶೇ.8.5ಕ್ಕೆ ತಲುಪಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಮೂಲಗಳು ತಿಳಿಸಿವೆ.
ಮುಂಬರುವ 2011-12ರ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.9ಕ್ಕೆ ವಿಸ್ತರಿಸುವ ಸಾಧ್ಯತೆಗಳಿವೆ ಎಂದು ಸಲಹಾ ಸಮಿತಿ ಅಧ್ಯಕ್ಷ ಸಿ.ರಂಗರಾಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ಮತ್ತಷ್ಟು ಕಠಿಣ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.
ದೇಶದ ಮಾರುಕಟ್ಟೆಗಳ ನಗದು ಹರಿವಿನ ಪ್ರಮಾಣ ಬಿಗಿಗೊಳಿಸಿದಲ್ಲಿ, ಯಾಂತ್ರಿಕವಾಗಿ ಹಣಕಾಸು ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರ್‌ಬಿಐ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ರಂಗರಾಜನ್ ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್, ತ್ರೈಮಾಸಿಕ ಆರ್ಥಿಕ ಪರಿಷ್ಕರಣೆ ನಡೆಸುವ ಕೆಲ ದಿನಗಳು ಮುಂಚಿತವಾಗಿ ಸಲಹಾ ಸಮಿತಿ ಅಧ್ಯಕ್ಷ ರಂಗರಾಜನ್ ಹೇಳಿಕೆ ಹೊರಬಿದ್ದಿದೆ.
ರಿಸರ್ವ್ ಬ್ಯಾಂಕ್ ಪ್ರಸಕ್ತ ತಿಂಗಳಿನಲ್ಲಿ, ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸುವ ನಿರೀಕ್ಷೆಗಳಿವೆ ಎಂದು ಬ್ಯಾಂಕಿಂಗ್ ಕ್ಷೇತ್ರದ ಮೂಲಗಳು ತಿಳಿಸಿವೆ.
ರಂಗರಾಜನ್ ಅವರ ಪ್ರಕಾರ, ಹಣದುಬ್ಬರ ದರ ಮಾರ್ಚ್ 2011ರಲ್ಲಿ ಎರಡಂಕಿಯಿಂದ ಶೇ.6.5ಕ್ಕೆ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.