ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.8.5ಕ್ಕೆ ತಲುಪಲಿದ್ದು, ಮುಂದಿನ ವರ್ಷದಲ್ಲಿ ಶೇ.9ರ ಗುರಿಯನ್ನು ತಲುಪಲಿದೆ ಎಂದು ಪ್ರದಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಮೂಲಗಳು ತಿಳಿಸಿವೆ.
ವಾರ್ಷಿಕ ಹಣದುಬ್ಬರ ದರ ಜೂನ್ ತಿಂಗಳ ಅವಧಿಯಲ್ಲಿ ಶೇ.10.50ಕ್ಕೆ ತಲುಪಿದ್ದು, ಮುಂಬರುವ ಡಿಸೆಂಬರ್‌ನಲ್ಲಿ ಶೇ.7-8ಕ್ಕೆ ಇಳಿಕೆಯಾಗಲಿದ್ದು, ಮಾರ್ಚ್ ವೇಳೆಗೆ ಶೇ.6.5ಕ್ಕೆ ಕುಸಿಯಲಿದೆ ಎಂದು ಸಮಿತಿ ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ದೇಶದ ಕೃಷಿ ಕ್ಷೇತ್ರ ಶೇ.4-5ಕ್ಕೆ ಏರಿಕೆಯಾಗಲಿದೆ ಕೈಗಾರಿಗೆ ಅಭಿವೃದ್ಧಿ ಶೇ.9.7ರಷ್ಟು ಮತ್ತು ಸೇವಾ ಕ್ಷೇತ್ರ ಶೇ.8.9ರಷ್ಟು, ಒಟ್ಟಾರೆ ಅಭಿವೃದ್ಧಿ ಶೇ.8.5ಕ್ಕೆ ಏರಿಕೆಯಾಗಲಿದೆ ಎಂದು ಸಲಹಾ ಸಮಿತಿಯ ಅಧ್ಯಕ್ಷ ಸಿ.ರಂಗರಾಜನ್ ತಿಳಿಸಿದ್ದಾರೆ.
ದೇಶದ ಜಿಡಿಪಿ ದರ ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ಶೇ.6.7ರಿಂದ ಶೇ.7.2ಕ್ಕೆ ಏರಿಕೆಯಾಗಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.8ರ ಗಡಿಯನ್ನು ದಾಟುವ ವಿಶ್ವಾಸವಿದೆ ಎಂದು ವಿವರಣೆ ನೀಡಿದ್ದಾರೆ.