ಆಹಾರ ಮತ್ತು ಇಂಧನ ದರಗಳ ಏರಿಕೆಯನ್ನು ವಿರೋಧಿಸಿ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿದಿರುವ ಮಧ್ಯೆಯು,ಪ್ರಸಕ್ತ ವರ್ಷದಲ್ಲಿ ಪ್ರಥಮ ಬಾರಿಗೆ ಆಹಾರ ಹಣದುಬ್ಬರ ದರ ಶೇ.9.67ಕ್ಕೆ ಇಳಿಕೆಯಾಗಿದೆ.
ತರಕಾರಿ ದರಗಳು ವಿಶೇಷವಾಗಿ ಆಲೂಗಡ್ಡೆ ಮತ್ತು ಈರುಳ್ಳಿ ದರಗಳ ಇಳಿಕೆಯಿಂದಾಗಿ, ಜುಲೈ 17ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.2.80ರಷ್ಟು ಇಳಿಕೆಯಾಗಿದೆ. ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.12.47ಕ್ಕೆ ಏರಿಕೆ ಕಂಡಿತ್ತು.
ವಾರ್ಷಿಕ ಆಧಾರದನ್ವಯ ಆಲೂಗಡ್ಡೆ ದರದಲ್ಲಿ ಶೇ.46ರಷ್ಟು ಇಳಿಕೆಯಾಗಿದ್ದು, ಈರುಳ್ಳಿ ದರದಲ್ಲಿ ಶೇ.10ರಷ್ಟು ಕುಸಿತ ಕಂಡಿದೆ.ಒಟ್ಟಾರೆ ತರಕಾರಿ ದರಗಳಲ್ಲಿ ಶೇ.14.77ರಷ್ಟು ಇಳಿಕೆ ಕಂಡಿದೆ ಎಂದು ಸರಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಏತನ್ಮಧ್ಯೆ, ಹಾಲು ದರದಲ್ಲಿ ಶೇ.19.03ರಷ್ಟು ಏರಿಕೆಯಾಗಿದ್ದು, ಹಣ್ಣಿನ ದರದಲ್ಲಿ 12.14ರಷ್ಟು ಏರಿಕೆ ಕಂಡಿದೆ.ಒಟ್ಟಾರೆ ಹಾಲು, ಹಣ್ಣು ದರಗಳಲ್ಲಿ ಶೇ.21.23ರಷ್ಟು ಏರಿಕೆಯಾಗಿದೆ.
ವಾರದ ಆಧಾರದನ್ವಯ, ಈರುಳ್ಳಿ ದರದಲ್ಲಿ ಶೇ.0.66ರಷ್ಟು ,ಆಲೂಗಡ್ಡೆ ದರದಲ್ಲಿ ಶೇ.2.06 ರಷ್ಟು ಏರಿಕೆ ಕಂಡಿದೆ.