ಮುಂಬರುವ ವರ್ಷದಿಂದ ಭಾರತದಲ್ಲಿ 1.3ಲಕ್ಷ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉಕ್ಕು ಘಟಕದ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಅರ್ಸೆಲ್ಲರ್ ಮಿತ್ತಲ್ ಕಂಪೆನಿಯ ಮೂಲಗಳು ತಿಳಿಸಿವೆ.
ಮುಂದಿನ ವರ್ಷದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.ಮೊದಲ ಅಥವಾ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಘಟಕದ ಕಾರ್ಯರಂಭವಾಗುವ ಸಾಧ್ಯತೆಗಳಿವೆ ಎಂದು ಅರ್ಸೆಲ್ಲರ್ ಮಿತ್ತಲ್ ಕಂಪೆನಿ ಮುಖ್ಯಸ್ಥ ಹಾಗೂ ಮುಖ್ಯ ಕಾರ್ಯನಿರ್ವಾಹಕ ಲಕ್ಷ್ಮಿ ಮಿತ್ತಲ್ ತಿಳಿಸಿದ್ದಾರೆ.
ಅರ್ಸೆಲ್ಲರ್ ಮಿತ್ತಲ್ ಕಂಪೆನಿ, ಎರಡನೇ ತ್ರೈಮಾಸಿಕ ಅವಧಿಯಲ್ಲಿ 1.7 ಬಿಲಿಯನ್ ಡಾಲರ್‌ಗಳ ನಿವ್ವಳ ಲಾಭಗಳಿಸಿದೆ. ಚೀನಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಉಕ್ಕು ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಲಾಭಾಂಶದಲ್ಲಿ ಇಳಿಕೆಯಾಗಿದೆ ಎಂದು ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.
ಮೂರನೇ ತ್ರೈಮಾಸಿಕ ಅವಧಿಯ ವಹಿವಾಟಿನಲ್ಲಿ ಅಲ್ಪ ಕುಸಿತ ಕಾಣುವ ಸಾಧ್ಯತೆಗಲಿವೆ. ಭಾರತದಲ್ಲಿ ಉಕ್ಕು ವಹಿವಾಟು ಶೇ.10ರಷ್ಟು ಚೇತರಿಕೆ ಕಾಣಲಿದೆ ಎಂದು ಹೇಳಿದ್ದಾರೆ.
ವಿಶ್ವದ ಉಕ್ಕು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರುವ ಅರ್ಸೆಲ್ಲರ್ ಮಿತ್ತಲ್, ಜಾಗತಿಕ ಉತ್ಪಾದನೆಯಲ್ಲಿ ಶೇ.6ರಷ್ಟು ಪಾಲನ್ನು ಹೊಂದಿದೆ. ಒರಿಸ್ಸಾ, ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಉಕ್ಕು ಘಟಕಗಳನ್ನು ಶೀಘ್ರದಲ್ಲಿ ಆರಂಭಿಸುವ ಯೋಜನೆಯಿದೆ ಎಂದು ಅರ್ಸೆಲ್ಲರ್ ಮುಖ್ಯಸ್ಥ ಲಕ್ಷ್ಮಿ ಮಿತ್ತಲ್ ತಿಳಿಸಿದ್ದಾರೆ.