ಪರ್ಸನಲ್ ಕಂಪ್ಯೂಟರ್, ಪ್ಲೇಸ್ಟೇಶನ್ ಗೇಮ್ಸ್, ಟೆಲಿವಿಜನ್ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಜಾಗತಿಕ ಮಟ್ಟದಲ್ಲಿ ಖ್ಯಾತಿಯನ್ನು ಪಡೆದ ಸೋನಿ ಸಂಸ್ಥೆ, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 25.7 ಬಿಲಿಯನ್ ಯೆನ್‌ಗಳ ನಿವ್ವಳ ಲಾಭಗಳಿಸಿದೆ.
ಟೋಕಿಯೋ ಮೂಲದ ಎಲೆಕ್ಟ್ರಾನಿಕ್ಸ್ ಮತ್ತು ಎಂಟರ್‌ಟೈನ್‌ಮೆಂಟ್ ವಸ್ತುಗಳ ತಯಾರಿಕೆ ಸಂಸ್ಥೆ ಸೋನಿ, ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ 25.7 ಬಿಲಿಯನ್ ಯೆನ್‌ಗಳ ನಿವ್ವಳ ಲಾಭಗಳಿಸಿದೆ. ಕಳೆದ ವರ್ಷದ ಏಪ್ರಿಲ್-ಜೂನ್ ತಿಂಗಳ ಅವಧಿಯಲ್ಲಿ 37.1 ಬಿಲಿಯನ್ ಯೆನ್‌ಗಳಷ್ಟು ನಿವ್ವಳ ಕುಸಿತ ಕಂಡಿತ್ತು.
ಕಂಪೆನಿಯ ನಿವ್ವಳ ಆದಾಯದಲ್ಲಿ ಶೇ.3.8ರಷ್ಟು ಏರಿಕೆಯಾಗಿ 1.66 ಟ್ರಿಲಿಯನ್ ಯೆನ್‌ಗಳಿಗೆ ತಲುಪಿದೆ.
ಸೋನಿ ಸಂಸ್ಥೆ, ಜಾಗತಿಕ ಮಾರುಕಟ್ಟೆಗಳಲ್ಲಿ ಚೇತರಿಕೆಯಾಗಿದ್ದರಿಂದ ಮುಂದಿನ ವರ್ಷದ ಅವಧಿಯಲ್ಲಿ ಕೂಡಾ ನಿವ್ವಳ ಲಾಭದಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ. ಮುಂಬರುವ 2011ರ ಅವಧಿಯ ಆರ್ಥಿಕ ವರ್ಷಾಂತ್ಯಕ್ಕೆ 60 ಬಿಲಿಯನ್ ಯೆನ್ ನಿವ್ವಳ ಲಾಭವಾಗಲಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.