ಕಳೆದ ಜೂನ್ ತಿಂಗಳಲ್ಲಿ ಇಂಧನ ದರಗಳ ಏರಿಕೆಯ ನಂತರ ತೈಲ ಕಂಪೆನಿಗಳು 53,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುವ ಸಾಧ್ಯತೆಗಳಿವೆ ಎಂದು ತೈಲ ಕಂಪೆನಿಗಳು ಭಾವಿಸಿದ್ದವು. ಆದರೆ, ಇದೀಗ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು 57,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸಲಿದೆ ಎಂದು ಹೇಳಿಕೆ ನೀಡಿವೆ.
ಮೂರು ತೈಲ ಕಂಪೆನಿಗಳು ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟದಿಂದಾಗಿ ಪ್ರತಿನಿತ್ಯ 131 ಕೋಟಿ ರೂಪಾಯಿಗಳ ನಷ್ಟವನ್ನು ಎದುರಿಸುತ್ತಿವೆ ಎಂದು ತೈಲ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದರಿಂದ 2010-11ರ ಆರ್ಥಿಕ ವರ್ಷಾಂತ್ಯಕ್ಕೆ 57,000 ಕೋಟಿ ರೂಪಾಯಿಗಳ ನಿವ್ವಳ ನಷ್ಟ ಅನುಭವಿಸಬೇಕಾಗಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಗಳ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರಿಂದ 20,275 ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಮೊದಲ ತ್ರೈಮಾಸಿಕ ಅವಧಿಯಲ್ಲಿ ಒಎನ್‌ಜಿಸಿ, ಗೇಲ್ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಕಂಪೆನಿಗಳು ಒಟ್ಟು 6,690.68 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ.
ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪೆನಿಗಳು ಪ್ರಸ್ತುತ ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದಾಗಿ 2.76 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿವೆ. ಸೀಮೆಎಣ್ಣೆ ಮಾರಾಟದಿಂದ 15.41 ರೂಪಾಯಿ ಮತ್ತಪ ಅಡುಗೆ ಅನಿಲ ಮಾರಾಟದಿಂದ 170.57 ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿವೆ.