ಜೇಮ್ಸ್‌ಬಾಂಡ್ ಕಾರು ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ
ಮುಂಬೈ, ಗುರುವಾರ, 5 ಆಗಸ್ಟ್ 2010( 18:25 IST )
ಜೇಮ್ಸ್ ಬಾಂಡ್ ಚಾಲನೆ ಮಾಡಿದ ಅಸ್ಟೊನ್ ಮಾರ್ಟಿನ್ ಮಾಡೆಲ್ ಕಾರು ವರ್ಷಾಂತ್ಯಕ್ಕೆ ಭಾರತದ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಮೂರು ಕೋಟಿ ರೂಪಾಯಿ ದರವನ್ನು ನಿಗದಿಪಡಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಇಂಗ್ಲೆಂಡ್ ಮೂಲದ ಕಾರು ತಯಾರಿಕೆ ಸಂಸ್ಥೆ, ಅಸ್ಟೊನ್ ಮಾರ್ಟಿನ್ ಮಾಡೆಲ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮುಂಬೈನಲ್ಲಿ ಮೊದಲ ಬಾರಿಗೆ ಶೋರೂಂ ತೆರೆಯಲಿದೆ.
ಆತ್ಮಿಯ ಮೂಲಗಳ ಪ್ರಕಾರ, ಅಸ್ಟೊನ್ ಮಾರ್ಟಿನ್ ಕಂಪೆನಿ ಮುಂಬೈ ಮೂಲದ ಬಿಎಂಡಬ್ಲೂ ಡೀಲರ್ ಕಂಪೆನಿಯಾದ ಇನ್‌ಫಿನಿಟಿ ಕಾರ್ ಕಂಪೆನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಭಾರತೀಯ ಮಾರುಕಟ್ಟೆಗೆ ವಿತರಕರನ್ನು ಕೂಡಾ ನೇಮಕ ಮಾಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಇನ್‌ಫಿನಿಟಿ ಕಂಪೆನಿ ಮುಂದಿನ ವಾರದಿಂದ ಅಸ್ಟೊನ್ ಮಾರ್ಟಿನ್ ಕಾರಿನ ಬುಕ್ಕಿಂಗ್ ಆರಂಭಿಸಲಿದ್ದು,ಮುಂಬರುವ 5-6 ತಿಂಗಳ ಅವಧಿಯಲ್ಲಿ ಕಾರುಗಳನ್ನು ವಿತರಿಸಲಾಗುವುದು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಟೊನ್ ಮಾರ್ಟಿನ್ ಕಂಪೆನಿ ಆರಂಭದಲ್ಲಿ ನಾಲ್ಕು ಮಾಡೆಲ್‌ಗಳನ್ನು ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ವಿ8, ಡಿಬಿ9, ರಾಪಿಡೆ ಮತ್ತು ಡಿಬಿಎಸ್ ಮಾಡೆಲ್‌ಗಳು ಸೇರ್ಪಡೆಯಾಗಿವೆ. ಕಾರುಗಳ ದರವನ್ನು ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ವಿ8 ಮತ್ತು ಡಿಬಿ9 ಮಾಡೆಲ್ ಕಾರುಗಳ ದರ 1.35ಕೋಟಿ ರೂಪಾಯಿಗಳಿಂದ 1.9 ಕೋಟಿ ರೂಪಾಯಿಗಳಾಗಿವೆ. ರಾಪಿಡೆ ಮತ್ತು ಡಿಬಿಎಸ್ ಮಾಡೆಲ್ ಕಾರುಗಳ ದರ 2.3ಕೋಟಿ ರೂಪಾಯಿಗಳಿಂದ 2.8ಕೋಟಿ ರೂಪಾಯಿಗಳಾಗಿವೆ. ಇದನ್ನು ಹೊರತುಪಡಿಸಿ ಸಿಮೆ ಹಾಗೂ ನೋಂದಾವಣಿ ಶುಲ್ಕವನ್ನು ಗ್ರಾಹಕರು ಭರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.