ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ನಿಯಮಗಳನ್ನು,ಖಾಸಗಿ ಟೆಲಿಕಾಂ ಕಂಪೆನಿಗಳು ಹೇಗೆ ಉಲ್ಲಂಘಿಸುತ್ತಿವೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ.
ಬಿರ್ಲಾ ಗ್ರೂಪ್ ಮಾಲೀಕತ್ವದ ಖಾಸಗಿ ಮೊಬೈಲ್ ಕಂಪೆನಿ, ಐಡಿಯಾ ಸೆಲ್ಯೂಲರ್, ವ್ಯಕ್ತಿ ಮತ್ತು ಆತನ ಕಂಪೆನಿಗೆ 3,640 ಸಂಪರ್ಕಗಳನ್ನು ನೀಡಿ ಅಚ್ಚರಿ ಮೂಡಿಸಿದ್ದು, ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಕೂಡಾ ಉಲ್ಲಂಘಿಸಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
ಹೌದು, ಐಡಿಯಾ ಸೆಲ್ಯೂಲರ್ ಕಂಪೆನಿ ಏಕೈಕ ವ್ಯಕ್ತಿಗೆ ಹಾಗೂ ಆತನ ದೆಹಲಿಯ ಲಿಮ್ಕೊ ಸೇಲ್ಸ್ ಕಾರ್ಪೋರೇಶನ್ ಕಂಪೆನಿಗೆ 3,640 ಪೋಸ್ಟ್ ಪೇಯ್ಡ್ ಸಂಪರ್ಕಗಳನ್ನು ನೀಡಿದೆ ಎಂದು ಟೆಲಿಕಾಂ ಇಲಾಖೆ ತಮಗೆ ವರದಿಯನ್ನು ಸಲ್ಲಿಸಿರುವುದಾಗಿ ಟೆಲಿಕಾಂ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಸಚಿನ್ ಪೈಲಟ್ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಹಿರಂಗಪಡಿಸಿದ್ದಾರೆ.
ಖಾಸಗಿ ಮೊಬೈಲ್ ಕಂಪನಿಗಳು ಏಕೈಕ ಗ್ರಾಹಕ, ವ್ಯಕ್ತಿಗೆ ಅಥವಾ ಕಂಪೆನಿಗೆ ಹಾಗೂ ಒಂದೇ ಸ್ಥಳದಲ್ಲಿ ಹೆಚ್ಚಿನ ಸಂಪರ್ಕಗಳನ್ನು ನೀಡಿದಲ್ಲಿ ನೈಜ ಗ್ರಾಹಕರ ಪತ್ತೆ ಮಾಡಲು, ಭಧ್ರತಾ ಸಂಸ್ಥೆಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಗೃಹಸಚಿವಾಲಯ ಈಗಾಗಲೇ ಮೊಬೈಲ್ ಕಂಪೆನಿಗಳಿಗೆ ಮಾಹಿತಿ ರವಾನಿಸಿದೆ ಎಂದು ಪೈಲಟ್ ಸಂಸತ್ತಿಗೆ ತಿಳಿಸಿದ್ದಾರೆ.
ಐಡಿಯಾ ಸೆಲ್ಯೂಲರ್ ಕಂಪೆನಿ, ದೇಶದಲ್ಲಿ 68 ಮಿಲಿಯನ್ ಮೊಬೈಲ್ ಗ್ರಾಹಕರನ್ನು ಹೊಂದಿದ್ದು, ದೇಶದ ಎಲ್ಲಾ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.