ನೆರೆಯ ರಾಷ್ಟ್ರವಾದ ಬಾಂಗ್ಲಾದೇಶದ ಸಂಪರ್ಕ ಕ್ಷೇತ್ರದ ಅಭಿವೃದ್ಧಿ ಹಾಗೂ ಇತರ ಮೂಲಸೌಕರ್ಯ ಕ್ಷೇತ್ರಗಳ ಸೌಲಭ್ಯಗಳಿಗಾಗಿ ಬಿಲಿಯನ್ ಡಾಲರ್ ಸಾಲವನ್ನು ನೀಡಲು ನಿರ್ಧರಿಸಿದ್ದು, ವಿತ್ತಸಚಿವ ಪ್ರಣಬ್ ಮುಖರ್ಜಿ ಶನಿವಾರದಂದು ಬಾಂಗ್ಲಾದೇಶದ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿತ್ತಸಚಿವ ಮುಖರ್ಜಿ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ವಿದೇಶಾಂಗ ಸಚಿವ ದಿಪು ಮೋನಿ ಮತ್ತು ವಿತ್ತ ಸಚಿವ ಎಎಂಎ ಮುನಿತ್ ಅವರನ್ನು ಭಾರತಕ್ಕೆ ಅಹ್ವಾನಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಕಳೆದ ವರ್ಷ ಉಭಯ ದೇಶಗಳ ಮಧ್ಯೆ ನಡೆದ ಒಪ್ಪಂದಗಳನ್ನು ಜಾರಿಗೆ ತಂದಿರುವ ಕುರಿತಂತೆ ಸಚಿವ ಪ್ರಣಬ್ ಮುಖರ್ಜಿ ಪರಿಶೀಲನೆಯನ್ನು ನಡೆಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ, ರೈಲ್ವೆ , ಸಂಪರ್ಕ ಕ್ಷೇತ್ರ ಮತ್ತು ಇತರ ಕ್ಷೇತ್ರಗಳ ಅಭಿವೃದ್ಧಿಗೆ, ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಕಳೆದ ವರ್ಷದ ಜನೆವರಿ ತಿಂಗಳ ಅವಧಿಯಲ್ಲಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಬಾಂಗ್ಲಾ ಪ್ರದಾನಿ ಶೇಖ್ ಹಸೀನಾ ಅವರೊಂದಿಗಿನ ಮಾತುಕತೆ ಸಂದರ್ಭದಲ್ಲಿ, ಒಂದು ಬಿಲಿಯನ್ ಡಾಲರ್ ಆರ್ಥಿಕ ಸಾಲವನ್ನು ನೀಡಲು ಸಮ್ಮತಿಸಲಾಗಿತ್ತು.